ಉಡುಪಿ, ಏ 20(DaijiworldNews/MS): ಕೋವಿಡ್-19 ಎರಡನೆ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಜಾರಿಗೊಳಿಸಿದ ಮಾರ್ಗಸೂಚಿ ಆದೇಶವನ್ನು ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಪಾಲನೆ ಮಾಡುವ ಮೂಲಕ ಸಮುದಾಯದ, ಸಮಾಜದ ಮತ್ತು ದೇಶದ ಆರೋಗ್ಯ ಕಾಪಾಡಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮನವಿ ಮಾಡಿದೆ.
ಮತ್ತೊಮ್ಮೆ ಕೋವಿಡ್-19 ನಮಗೆ ಎದುರಾಗಿದೆ. ಈ ಹಿಂದಿನಂತೇ ಸಾಕಷ್ಟು ಮುತುವರ್ಜಿಯಿಂದ ಮುಂಜಾಗೃತೆ ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪವಿತ್ರ ರಮದಾನ್ ತಿಂಗಳ ವೃತಾಚರಣೆಯ ಸಮಯವಾಗಿರುವ ಇಂದು ಮಸೀದಿಗಳಲ್ಲಿ ಈ ಹಿಂದಿನಂತೆ ಕಟ್ಟುನಿಟ್ಟಿನ ಕೋವಿಡ್ ನಿಯಮ ಗಳನ್ನು ಪಾಲಿಸುವ ಮೂಲಕ ಕೋವಿಡ್ ಎರಡನೆ ಅಲೆಯನ್ನು ತಡೆಯಬಹುದಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಇಬ್ರಾಹೀಮ್ ಸಾಹೇಬ್ ಕೋಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದುದರಿಂದ ಮಸೀದಿ ಜಮಾಅತ್ಗಳು ಮತ್ತು ಸ್ವಯಂ ಸೇವಕರು ಮಸೀದಿಗೆ ಬರುವ ಪ್ರಾರ್ಥನಾರ್ಥಿಗಳ ಟೆಂಪರೇಚರ್, ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ -ಮುಸಲ್ಲಾ ಮತ್ತು ನಮಾಝ್ ನಿರ್ವಹಿಸುವವರ ನಡುವಿನ ಅಂತರ ಇತ್ಯಾದಿಗಳ ಬಗ್ಗೆ ನಿಗಾ ಇರಿಸಬೇಕು. ವಯೋವೃದ್ಧರು ಮತ್ತು ಮಕ್ಕಳು ಮನೆಯಲ್ಲಿಯೇ ನಮಾಝನ್ನು ನಿರ್ವಹಿಸಬೇಕು. ಉಳಿದಂತೆ ಮುಸಲ್ಲಿಗಳು ಮಸೀದಿಯ ಮೇಲ್ವಿಚಾರಕರೊಂದಿಗೆ ಸಂಪೂರ್ಣವಾಗಿ ಸಹಕರಿಸುವ ಮೂಲಕ ಸರಳವಾದ ಆರೋಗ್ಯ ಪೂರ್ಣ ರಂಜಾನ್ ವ್ರತಾಚರಣೆ ಕೈಗೊಳ್ಳಬೇಕು ಎಂದು ಅವರು ವಿನಂತಿ ಮಾಡಿದ್ದಾರೆ.