ಕಾರ್ಕಳ, ಸೆ.18 (MSP): ತವರು ಮನೆಗೆ ಹೊರಟ ಮಹಿಳೆಯೊಬ್ಬರು ನಿಗೂಢ ರೀತಿಯಲ್ಲಿ ನಾಪತ್ತೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ಹಂದಿಗಿಟ್ಟ ಉರುಳಿಗೆ ಸಿಲುಕಿ ಮೃತಪಟ್ಟಿದ್ದ ಮಹಿಳೆಯ ಶವವನ್ನು ಆರೋಪಿಗಳು ನಿಟ್ಟೆ ಪರಪ್ಪಾಡಿ ಎಂಬಲ್ಲಿ ಎಸೆದಿದ್ದು, ಒಂಬತ್ತು ದಿನಗಳ ಬಳಿಕ ಪ್ರಕರಣವನ್ನು ಭೇದಿಸುವಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸರು ಯಶಸ್ಸು ಕಂಡಿದ್ದಾರೆ. ಕಾರ್ಕಳ ತಾಲೂಕು ಮುಂಡ್ಕೂರು ಸಚ್ಚರಿಪೇಟೆ ಬೊಮ್ಮಯ ಲಚ್ಚಿಲ್ನ ನಿವಾಸಿ ಗಿರಿಜಾ ಪೂಜಾರಿ (50) ಘಟನೆಯಲ್ಲಿ ಜೀವತೆತ್ತ ದುರ್ದೈವಿ.
ಕಳೆದ ಏಳು ತಿಂಗಳುಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಕುಡಿತದ ಚಟಕ್ಕೂ ಒಳಗಾಗಿದ್ದರೆನ್ನಲಾಗಿದೆ. ಈ ನಡುವೆ ಮುಂಡ್ಕೂರಿನ ಹೋಟೆಲ್ವೊಂದರಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿಕೊಂಡಿದ್ದರು. ಸಪ್ಪೆಂಬರ್ 8ರ ಸಂಜೆ 7ಗಂಟೆಗೆ ಕನ್ನಡಬೆಟ್ಟುನಲ್ಲಿರುವ ತವರು ಮನೆಗೆಂದು ಹೊರಟು ಹೋದವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿತ್ತು.
ಜೋಡಿ ಚಪ್ಪಲು ಹಾಗೂ ತಾಂಬೂಲದ ಚೀಲ
ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಗಿರಿಜಾ ಪೂಜಾರಿಯ ಹುಡುಕಾಟ ಎಲ್ಲೆಡೆಯಲ್ಲಿ ಮುಂದುವರಿದಿತ್ತು. ಇವರ ಹುಡುಕಾಟಕ್ಕೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಕೈ ಜೋಡಿಸಿದ್ದರು. ಸಪ್ಪೆಂಬರ್ 16ರಂದು ಗಿರಿಜಾ ಪೂಜಾರಿಯ ಹುಡಕಾಟ ಮತ್ತೆ ಮುಂದುವರಿಸಿದಾಗ ತವರು ಮನೆಗೆ ಹೋಗುವ ದಾರಿ ಮಧ್ಯೆ ಕನ್ನಡಬೆಟ್ಟು ಪೊಸರಲು ಪರಿಸರದಲ್ಲಿ ಗಿರಿಜಾ ಪೂಜಾರಿಯ ಜೋಡು ಚಪ್ಪಲು ಹಾಗೂ ತಾಂಬುಲದ ಚೀಲ ಪತ್ತೆಯಾಗಿತ್ತು.
ಅವ್ಯಾಹತವಾಗಿ ನಡೆಯುತ್ತಿದೆ ಕಾಡುಹಂದಿ ಭೇಟೆ
ಕಾಡುಹಂದಿ ಮಾಂಸಕ್ಕೆ ಭಾರೀ ಬೇಡಿಕೆ ಇದ್ದು, ನಿರ್ದಿಷ್ಠ ಹೋಟೆಲ್ಗಳಿಗೆ, ಬಾರ್ಗಳಿಗೆ ಅದರ ಮಾಂಸ ಮಾರಾಟವಾಗುತ್ತಿತ್ತಲ್ಲದೇ ಅದರಿಂದ ತಂಡವೊಂದು ನೇರ ಹಣಗಳಿಸುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು.
ಮುಂಡ್ಕೂರು, ಕನ್ನಡಬೆಟ್ಟು ಹಾಗೂ ಅದರ ಅಸುಪಾಸುಗಳಲ್ಲಿ ಕಾಡುಹಂದಿ ಭೇಟೆ ಅವ್ಯಾಹತವಾಗಿ ನಡೆಯುತ್ತಿತ್ತು. ರಸ್ತೆ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಅಕ್ರಮ ವಿದ್ಯುತ್ ಜೋಡಣೆ ನಡೆಸಿ ವಿದ್ಯುತ್ ಕಳವುಗೈದು ಉರುಳುಗೆ ಸಂಪರ್ಕ ಕಲ್ಪಿಸುತ್ತಿದ್ದರು. ಈ ಎಲ್ಲಾ ಎಡವಟ್ಟು ಮೆಸ್ಕಾಂ ಇಲಾಖೆ ಹಾಗೂ ಅರಣ್ಯ ಇಲಾಖೆಗಳಿಗೆ ತಿಳಿದರೂ ಅದ್ಯಾವುದಕ್ಕೂ ಕ್ಯಾರೇ ಅನ್ನದೆ ಇದ್ದುದ್ದೇ ಮಹಿಳೆ ಜೀವಕ್ಕೆ ಕುತ್ತು ಬರಲು ಮತ್ತೊಂದು ಕಾರಣವಾಗಿದೆ.
ಹಂದಿ ಉರುಳಿನಲ್ಲಿ ಮಹಿಳೆಯ ಮೃತದೇಹ
ದುಷ್ಕರ್ಮಿಗಳ ಪಾಪದ ಕೂಪದಲ್ಲಿ ಕಾಡುಹಂದಿಗಳು ಬಲಿಯಾಗುತ್ತಿರುವ ಘಟನಾವಳಿಗಳು ಇಲ್ಲಿ ನಿರಂತರವಾಗಿ ನಡೆಯುತ್ತಿದೆಯಾದರೂ ಸಪ್ಪೆಂಬರ್ ೯ರಂದು ಇದಕ್ಕೆಲ್ಲಾ ಭಿನ್ನವಾಗಿ ಉರುಳಿನಲ್ಲಿ ಸಿಲುಕಿಕೊಂಡ ಮೃತ ನತದೃಷ್ಟ ಮಹಿಳೆಯದಾಗಿತ್ತು. ಇದರಿಂದ ಗಾಬರಿಗೊಳಗಾದ ಆರೋಪಿಗಳು, ತನಿಖೆಯ ಹಾದಿ ತಪ್ಪಿಸಲೆಂದು ವಾಹನದಲ್ಲಿ ಮಹಿಳೆಯ ಶವವನ್ನು ಸಾಗಿಸಿ ಪರಪ್ಪಾಡಿಯ ಹಾಡಿಯಲ್ಲಿ ಎಸೆದು ಹೋಗಿದ್ದರು.
ಮೂವರು ಆರೋಪಿತರು ಪೊಲೀಸರ ವಶದಲ್ಲಿ
ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡದಲ್ಲಿ ಇದ್ದ ಮೂವರನ್ನು ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.