ಬಂಟ್ವಾಳ, ಸೆ 17(SM): ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆಯಲ್ಲಿ ಕಳೆದ ಹಲವು ವರ್ಷಗಳಿಂದ ವಿದ್ಯುತ್ ಸೇರಿದಂತೆ ಮೂಲ ಸೌಕರ್ಯವಿಲ್ಲದೆ ಜೀವನ ಸಾಗಿಸುತ್ತಿದ್ದ ಅನಾಥೆ ವೃದ್ದೆ ಪೊಡಿ ಮುಗೇರ್ತಿಯವರಿಗೆ ಬಂಟ್ವಾಳ ರೋಟರಿ ಕ್ಲಬ್ ಉಚಿತ ಗ್ಯಾಸ್ ಹಾಗೂ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದೆ.
ವೃದ್ದೆಯ ಸಂಕಷ್ಟಕ್ಕೆ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಸ್ಪಂದಿಸಿ ಔದರ್ಯ ತೋರಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದ್ದ ಈಕೆಯ ಬಗ್ಗೆ ದಾಯ್ಜಿವರ್ಲ್ಡ್ ನಲ್ಲಿ ಸಮಗ್ರ ವರದಿ ಬಿತ್ತರಗೊಂಡಿತ್ತು. ಅಲ್ಲದೆ ಬಂಟ್ವಾಳ ನಗರ ಠಾಣಾ ಎಸೈ ಚಂದ್ರಶೇಖರ್ ಅವರು ಈಕೆಯ ಮನೆಗೆ ವಿದ್ಯುತ್ ಸಂಪರ್ಕ್ ಒದಗಿಸುವಂತೆ ಮೆಸ್ಕಾಂ ಇಲಾಖೆಗೆ ಪತ್ರ ಬರೆದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಂಟ್ವಾಳ ರೋಟರಿ ಕ್ಲಬ್ ಈ ಬಡ ಜೀವಕ್ಕೆ ನೆರವಾಗಿದೆ. ಕತ್ತಲೆಯ ಬದುಕಿಗೆ ಬೆಳಕು ಚೆಲ್ಲಿದೆ. ಹೊಗೆಯಾಡುತ್ತಿದ್ದ ಮನೆಯಲ್ಲಿ ಹೊಗೆ ಮುಕ್ತವನ್ನಾಗಿಸಿದೆ. ಮನೆಗೆ ಸೋಲಾರ್ ದೀಪ ಹಾಗೂ ಗ್ಯಾಸ್ ಸೌಕರ್ಯ ಒದಗಿಸುವ ಮೂಲಕ ಒಂಟಿ ವೃದ್ಧೆಯ ಮನೆಗೆ ಉದಾರತೆಯನ್ನು ರೋಟರ್ ಕ್ಲಬ್ ತೋರಿದೆ.
ಇನ್ನು ಇಂದು ಸೋಲಾರ್ ಹಾಗೂ ಗ್ಯಾಸ್ ಹಸ್ತಾಂತರ ಸಂದರ್ಭ ಬಂಟ್ಚಾಳ ನಗರ ಠಾಣೆಯ ಎಸ್ಐ ಚಂದ್ರಶೇಖರ್, ಬೀಟ್ ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಇನ್ನು ಒಂಟಿ ವೃದ್ಧೆಗೆ ನೆರವಾದ ರೋಟರಿಕ್ಲಬ್ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.