ಮಂಗಳೂರು, ಸೆ 17(SM): ಶಾಸಕರ ಮುಂದೆಯೇ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಾಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸದಾನಂದಗೆ ಜಿಲ್ಲಾ ಪಂಚಾಯತ್ ಸಿಇಒ ನೋಟಿಸ್ ಜಾರಿಗೊಳಿಸಿದ್ದಾರೆ. ದಾಯ್ಜಿವರ್ಲ್ಡ್ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಅವರು, ಲಂಚಕ್ಕೆ ಬೇಡಿಕೆ ಇಟ್ಟಿರುವ ಇಒ ಅವರ ವೀಡಿಯೋ ವೈರಲ್ ಆಗಿದ್ದು, ಈ ಬಗ್ಗೆ ೨೪ ಗಂಟೆಯೊಳಗೆ ಲಿಖಿತ ಸ್ಪಷ್ಟನೆ ನೀಡುವಂತೆ ಸಿಇಒ ರವಿಯವರು ನೋಟಿಸ್ ಜಾರಿಗೊಳಿಸಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕೃಷಿ ಜಂಟಿ ನಿರ್ದೇಶಕರಾದ ಆಂಟನಿಯವರಿಗೆ ಸೂಚಿಸಿದ್ದಾರೆ. ಹಾಗೂ ವರದಿ ನೀಡಲು ಮನವಿ ಮಾಡಿದ್ದಾರೆ. ಮೂರು ದಿನಗಳಲ್ಲಿ ಅವರು ನಮಗೆ ವರದಿ ನೀಡಲಿದ್ದಾರೆ. ಬಳಿಕ ಅದನ್ನು ಆಧರಿಸಿ ನಾವು ಇಲಾಖಾ ಮಟ್ಟದಲ್ಲಿ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಮಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಯ ಗ್ರಾಮಾಭಿವೃದ್ಧಿ ಅಧಿಕಾರಿಗಳು ಸೆಪ್ಟೆಂಬರ್ ೧೫ರ ಶನಿವಾರದಂದು, ತಾಲೂಕು ಪಂಚಾಯತ್ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಇಲ್ಲಿನ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸದಾನಂದ ಎಂಬವರು ಶಾಸಕ ಭರತ್ ಶೆಟ್ಟಿ ಅವರ ಮುಂದೆಯೇ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲು ಶಾಸಕರು ಸೂಚಿಸಿದ್ದರು. ಇದೀಗ ಜಿಲ್ಲಾ ಪಂಚಾಯತ್ ಸಿಇಒ ವಿಚಾರಣೆ ನಡೆಸಿ, ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.