ಉಡುಪಿ,ಸೆ17(SS): ಉಡುಪಿಯ ತೆಂಕ ನಿಡಿಯೂರು ವೀರಾಂಜನೇಯ ವ್ಯಾಯಾಮ ಶಾಲೆಯ ಬಳಿ 25 ಯುವಕರು ಹುಲಿವೇಷಕ್ಕೆ ಬಣ್ಣ ಹಚ್ಚಿದ್ದು, ಇದರಲ್ಲಿ ಇಬ್ಬರು ಹುಲಿವೇಷ ಧಾರಿಗಳಿಗೆ ಏಕಾಏಕಿ ಆವೇಶ ಬಂದಿರುವ ಘಟನೆ ಕಳೆದ ಕೆಲ ದಿನಗಳ ಹಿಂದೆ ನಡೆದಿದೆ.
ಉಡುಪಿಯ ತೆಂಕ ನಿಡಿಯೂರು ವೀರಾಂಜನೇಯ ವ್ಯಾಯಾಮ ಶಾಲೆಯ ಬಳಿ 25 ಯುವಕರು ಚೌತಿಯಂದು ಹುಲಿವೇಷಕ್ಕೆ ಬಣ್ಣ ಹಚ್ಚಿದ್ದರು. ಈ ಹುಲಿವೇಷಧಾರಿಗಳ ತಂಡ ಹಲವು ವರುಷಗಳಿಂದ ಹುಲಿವೇಷ ಧರಿಸಿ ಕುಣಿಯುವುದನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿತ್ತು. ಆದರೆ ಹುಲಿವೇಷ ಧರಿಸಿ ಕುಣಿಯುತ್ತಿದ್ದ ವೇಳೆ ಈ ತಂಡದ ಇಬ್ಬರು ಹುಲಿವೇಷಧಾರಿಗಳಿಗೆ ಏಕಾಏಕಿ ಆವೇಶ ಬಂದಿದೆ.
ಸಂದೀಪ್ ಹಾಗೂ ಹರೀಶ್ ದೈವ ಆವೇಶಗೊಂಡ ಯುವಕರು. ಮೈಮೇಲೆ ಶಕ್ತಿಯ ಆವೇಶಗೊಂಡ ನಂತರ ಸಂದೀಪ್ ಹಾಗೂ ಹರೀಶ್ ವಿಚಿತ್ರವಾಗಿ ವರ್ತಿಸಿದ್ದಾರೆ. ಎಲ್ಲೆಂದರಲ್ಲಿ ಓಡಲು ಯತ್ನಿಸಿದ್ದಾರೆ. ದೇವರ ತೀರ್ಥ ಪ್ರಸಾದ ಕೊಟ್ಟ ನಂತರ ಹುಲಿವೇಷಧಾರಿಗಳು ಆವೇಷ ಮುಕ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂದೀಪ್ ಹಾಗೂ ಹರೀಶ್, ನಮಗೆ ಕೆಲವು ನಿಮಿಷ ಏನಾಗಿದೆ ಎಂಬುವುದೇ ಗೊತ್ತಾಗಲಿಲ್ಲ. ವಿಚಿತ್ರ ಶಕ್ತಿ ಆವರಿಸಿದಂತಾಗಿತ್ತು. ಕೆಲ ಕಾಲದ ನಂತರ ಸಹಜ ಸ್ಥಿತಿಗೆ ಬಂದಿದ್ದೇವೆ. ಆಮೇಲೆ ಬಹಳ ಸುಸ್ತಾದಂತಾಗಿತ್ತು ಎಂದು ಹೇಳಿದ್ದಾರೆ.
ತುಳುನಾಡಿನ ಜನಪದ ಕಲೆಯಾದ ಹುಲಿವೇಷಕ್ಕೆ ದೈವಿಕ ಶಕ್ತಿ ಇದೆ. ಉಪವಾಸ ಮಾಡಿ, ಹರಕೆ ಹೊತ್ತು ಶೃದ್ಧೆಯಿಂದ ಹುಲಿವೇಷ ಧರಿಸಿದವರಿಗೆ ಆವೇಶ ಬರುತ್ತದೆ ಎಂಬ ನಂಬಿಕೆ ಜನರಲ್ಲಿದೆ.