ಇಸ್ರೇಲ್, ಸೆ17: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 11ನೇ ವರ್ಷದ ಗಣೇಶೋತ್ಸವ ಲೂನಾ ಪಾರ್ಕಿನಲ್ಲಿ ಅದ್ದೂರಿಯಿಂದ ನಡೆಯಿತು. ರತ್ನಾಕರ್ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಎಲ್ಲೆಡೆ ತಳಿರುತೋರಣ ಕಟ್ಟಿ ಹಿಂದೂ ಧರ್ಮದ ಸಂಭ್ರಮದ ಕಳೆ ಕಂಡು ಬಂತು.
ಬೆಳಿಗ್ಗೆ 9 ಗಂಟೆಗೆ ಶ್ರೀ ವಿನಾಯಕ ಪ್ರತಿಷ್ಠಾಪನಾ ಪೂಜೆ ನೆರವೇರಿತು. ಬಳಿಕ ಇಸ್ರೇಲ್ನ ವಿದ್ಯಾ ಸರಸ್ವತಿಯವರಿಂದ ಭಜನೆ ನಡೆಯಿತು. ಮಧ್ಯಾಹ್ನ ಮಹಾಗಣಪತಿಗೆ ಮಹಾಪೂಜೆ ಜರುಗಿ, ಪ್ರಸಾದ ವಿತರಣೆ ನಡೆಯಿತು. 1000ಕ್ಕೂ ಅಧಿಕ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಗಣೇಶೋತ್ಸವದ ಹಿನ್ನೆಲೆಯಲ್ಲಿ 20 ತಂಡಗಳ ನಡುವಿನ 4 ಓವರ್ಗಳ ಕ್ರಿಕೆಟ್ ಟೂರ್ನಮೆಂಟ್, ಮಹಿಳಾ ಕ್ರಿಕೆಟ್, ತ್ರೋಬಾಲ್, ವಾಲಿಬಾಲ್, ಮಡಕೆ ಒಡೆಯುವ ಸ್ಪರ್ಧೆ ಸೇರಿದಂತೆ ಹಲವು ಕ್ರೇಝಿ ಗೇಮ್ ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ಪ್ರತಿಭೆಗಳಿಂದ ಸಂಗೀತ ರಸಮಂಜರಿ ನಡೆಯಿತು. ರಾತ್ರಿ ಗಣೇಶನಿಗೆ ಮಹಾಮಂಗಳಾರತಿ ನಡೆಯಿತು.