ಉಡುಪಿ, ಏ. 17 (DaijiworldNews/HR): "ಉಡುಪಿ ಮತ್ತು ದ.ಕ.ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಹಾಗಾಗಿ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು, ಬದಲಾಗಿ ರಾಜಕೀಯ ಕಾರ್ಯಕ್ರಮಗಳ ಆವಶ್ಯಕತೆ ಇಲ್ಲ" ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ಸರಕಾರದ ಲಕ್ಷಣವಲ್ಲ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರೆ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಆ ಆದೇಶವನ್ನು ಹಿಂಪಡೆಯಬೇಕು" ಎಂದು ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದಾರೆ.
ಇನ್ನು ಸರಕಾರವು ರಾಜಕೀಯ ಕಾರ್ಯಕ್ರಮಗಳಿಗೆ ನೂರು ಜನ ಭಾಗವಹಿಸುವ ಅವಕಾಶ ನೀಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಕಾರ್ಯಕ್ರಮ ಅನಿವಾರ್ಯ ಇಲ್ಲ. ನಮ್ಮ ಜಿಲ್ಲೆಯ ಯಾವುದೇ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಪಡಿಸಬೇಡಿ. ಜನರ ಭಾವನೆಗಳಿಗೆ ಅಡ್ಡಿ ಮಾಡದೆ ತಕ್ಷಣ ಹಿಂದಕ್ಕೆ ತೆಗೆದುಕೊಳ್ಳಿ" ಎಂದು ಆಗ್ರಹಿಸಿದ್ದಾರೆ.
ಅವಿಭಾಜ್ಯ ಜಿಲ್ಲೆಗಳಲ್ಲಿ ಧಾರ್ಮಿಕ ಕೇಂದ್ರಗಳೇ ಹೆಚ್ಚು, ಮುಖ್ಯಮಂತ್ರಿ ಆರೋಗ್ಯ ಸಚಿವ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಕೋಲ, ನೇಮೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಹೂರ್ತ ನಿಗದಿಯಾಗಿದೆ. ಎಲ್ಲಾ ಸಿದ್ಧತೆಗಳು ನಡೆದಿವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ನಾನೊಬ್ಬ ಆಡಳಿತ ಪಕ್ಷದ ಸದಸ್ಯನಾಗಿ ಈ ಮಾತನ್ನು ಹೇಳುತ್ತಿದ್ದೇನೆ" ಎಂದರು.
ಇನ್ನು ಜನಸಂದಣಿಗೆ ನಿಯಂತ್ರಣ ಹೇರಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಿ, ಹಿಂದುಳಿದ ಜನಾಂಗದವರೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದುಡಿಯುತ್ತಾರೆ. ಬಡ ಜನರಿಗೆ ಇದರಿಂದ ಆರ್ಥಿಕ ಹೊಡೆತ ಬೀಳುತ್ತದೆ. ಕರಾವಳಿಯ ಜೀವನಪದ್ಧತಿಯನ್ನು ಅರ್ಥಮಾಡಿಕೊಳ್ಳಿ. ಉಡುಪಿ ನಗರಕ್ಕೆ ನೈಟ್ ಕರ್ಫ್ಯೂನ ಅಗತ್ಯವೂ ಇಲ್ಲ. ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಪರಿಹಾರ ಅಲ್ಲ" ಎಂದು ಹೇಳಿದ್ದಾರೆ.