ಕೊಚ್ಚಿ, ಸೆ17(SS): ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್ನ ರೋಮನ್ ಕ್ಯಾಥೊಲಿಕ್ ಬಿಷಪ್ ಫ್ರಾಂಕೊ ಮುಲ್ಲಕ್ಕಲ್ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಕ್ರೋಶ ಭುಗಿಲೆದ್ದಿದೆ.
ಜಲಂಧರ್ನ ರೋಮನ್ ಕ್ಯಾಥೊಲಿಕ್ ಬಿಷಪ್ ಫ್ರಾಂಕೊ ಮುಲ್ಲಕ್ಕಲ್ ಈಗಾಗಲೇ ತಮ್ಮ ಆಡಳಿತದ ಜವಾಬ್ದಾರಿಗಳನ್ನು ಹಿರಿಯ ಪಾದ್ರಿಯೊಬ್ಬರಿಗೆ ಹಸ್ತಾಂತರಿಸಿದ್ದಾರೆ. ಆದರೆ ಹುದ್ದೆಯನ್ನಿನ್ನೂ ಅವರು ತ್ಯಜಿಸಿಲ್ಲ. ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾ ತಂಡದ ಮುಂದೆ ಸೆ.19ರಂದು ಹಾಜರಿರಬೇಕು ಎಂದು ಕೇರಳ ಪೊಲೀಸರು ಸಮನ್ಸ್ ಜಾರಿ ಮಾಡಿದೆ.
ಇದೀಗ ಬಿಷಪ್ ಅವರ ಬಂಧನಕ್ಕೆ ಆಗ್ರಹಿಸಿ ಕೊಚ್ಚಿಯಲ್ಲಿ ಕ್ರೈಸ್ತ ಸನ್ಯಾಸಿನಿಯರು ನಡೆಸುತ್ತಿರುವ ಪ್ರತಿಭಟನೆ ಒಂಬತ್ತನೇ ದಿನಕ್ಕೆ ಕಾಲಿರಿಸಿದೆ. ಕೋಟಯಂ ಕಾನ್ವೆಂಟ್ನ ಸನ್ಯಾಸಿನಿಯರು ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕ್ರೈಸ್ತ ಸನ್ಯಾಸಿನಿಯು ಪೊಲೀಸ್ ದೂರು ನೀಡಿ ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಆಗಿದೆ. ಆದರೆ ಕಾನೂನಿನ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಅತ್ಯಾಚಾರ ಆರೋಪ ಪ್ರಕರಣಗಳಲ್ಲಿ ಅನುಸರಿಸಬೇಕಾದ ಕ್ರಮವನ್ನು ಈ ಪ್ರಕರಣದಲ್ಲಿ ಅನುಸರಿಸಲಾಗಿಲ್ಲ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಕಾನೂನು ಪ್ರಕ್ರಿಯೆ ಪಾರದರ್ಶಕವಾಗಿದ್ದು ನ್ಯಾಯದ ಪರ ನಿಲ್ಲಬೇಕು ಮತ್ತು ಜಲಂಧರ್ನ ರೋಮನ್ ಕ್ಯಾಥೊಲಿಕ್ ಬಿಷಪ್ ಫ್ರಾಂಕೊ ಮುಲ್ಲಕ್ಕಲ್ ಅವರನ್ನು ಶೀಘ್ರ ಬಂಧಿಸಬೇಕು ಎಂಬುವುದು ಪ್ರತಿಭಟನೆ ನಡೆಸುತ್ತಿರುವ ಸನ್ಯಾಸಿನಿಗಳ ಆಗ್ರಹವಾಗಿದೆ.