ಉಡುಪಿ, ಸೆ 16(SM): ಕರ್ನಾಟಕದ ಈಗಿನ ಸಮಿಶ್ರ ಸರ್ಕಾರ ಒಂಥರಾ ಲವ್ ಮ್ಯಾರೇಜ್ ಆದ ಹಾಗೆ. ಆದ್ದರಿಂದ ಅಕ್ಕಪಕ್ಕದ ಎಲ್ಲರನ್ನೂ ಹೊಂದಾಣಿಕೆ ಮಾಡಿಕೊಂಡು ಹೋಗದೇ ಇದ್ರೆ ಕಷ್ಟ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದ್ದಾರೆ. ಅವರು ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾಪು ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿಗಳನ್ನು ಸರ್ಕಾರದ ಅನುದಾನ ಮೂಲಕ ತರಿಸಿ ಇಷ್ಟು ಅಭಿವೃದ್ದಿ ಮಾಡಿದ ಬಳಿಕವೂ ಚುನಾವಣಾ ಕಣದಲ್ಲಿ ಸೋಲನ್ನು ಅನುಭವಿಸಿದ್ದಾರೆ ಎಂದರೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಈಗಿನ ಸಮ್ಮಿಶ್ರ ಸರಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಮಾಜಿ ಸಿ.ಎಂ. ಸಿದ್ದರಾಮಯ್ಯ ಹಾಕಿ ಕೊಟ್ಟ ಎಲ್ಲಾ ಯೋಜನೆಗಳನ್ನು ಮುಂದುವರಿಸುತ್ತಿದೆ ಎಂದರು.
ಇನ್ನು ಪಕ್ಷದಲ್ಲಿರುವ ಕಾರ್ಯಕರ್ತರನ್ನು ಬೆಳೆಸಿದರೆ ಪಕ್ಷ ಬೆಳೆಯುತ್ತದೆ. ಕಾಪುವಿನ ಎಲ್ಲಾ ಕಾಮಗಾರಿ ಮತ್ತು ಯೋಜನೆಗಳು ಮುಂದವರಿಯುತ್ತದೆ ಎಂದರು. ಅಲ್ಲದೆ ಮುಂಬರುವಂತಹ ಲೋಕಸಭೆ ಚುನಾವಣೆಗೆ ಈಗಿಂದೀಗಲೇ ತಯಾರಿಗಳನ್ನು ನಡೆಸುವಂತೆ ಕಾರ್ಯಕರ್ತರಿಗೆ ಸಚಿವೆ ಜಯಮಾಲಾ ಸೂಚನೆ ನೀಡಿದರು.