ಮಂಗಳೂರು, ಸೆ 16(SM): ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಲಾಡ್ಜ್ ವೊಂದರಲ್ಲಿ ಯುವತಿಯರನ್ನು ವೇಶ್ಯಾವಾಟಿಕೆಗೆ ಗ್ರಾಹಕರಿಗೆ ಒದಗಿಸುತ್ತಿದ್ದ ದಲ್ಲಾಳಿ(ಪಿಂಪ್) ಓರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ನೊಂದ ಯುವತಿಯರನ್ನು ರಕ್ಷಿಸಲಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದೀಪಕ್(೪೩) ಬಂಧಿತ.
ಸೆಪ್ಟೆಂಬರ್ ೧೬ರ ರವಿವಾರದಂದು ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಲಾಡ್ಜ್ ವೊಂದರಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಹಾಗೂ ವೇಶ್ಯಾವಾಟಿಕೆಗೆ ಯುವತಿಯರನ್ನು ಒದಗಿಸುತ್ತಿದ್ದ ಪಿಂಪ್ ದೀಪಕ್ ನನ್ನು ಬಂಧಿಸಿದ್ದಾರೆ. ಆತನ ಬಳಿಯಿದ್ದ 2 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಈ ವೇಶ್ಯಾವಾಟಿಕೆಯಲ್ಲಿ ಯುವತಿಯರನ್ನು ಒದಗಿಸುತ್ತಿದ್ದ ಇನ್ನೂ ಮೂವರು ದಲ್ಲಾಳಿಗಳಾದ ನಾಸೀರ್ ಉಪ್ಪಿನಂಗಡಿ, ನಾಸೀರ್ ಆಡ್ಯಾರ್ ಪದವು ಮತ್ತು ಜೀವನ್ ಪೂಜಾರಿ ಎಂಬವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧಕಾರ್ಯ ಮುಂದುವರೆಸಲಾಗಿದೆ. ವೇಶ್ಯಾವಾಟಿಕೆಯ ಕುರಿತಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.