ಬೆಂಗಳೂರು, ಸೆ 16 (MSP):ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹುಟ್ಟುಹಬ್ಬದಂದು ರಾಜಕೀಯದ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿಲಿದ್ದಾರೆ. ಹೌದು ರಾಜಕೀಯಕ್ಕೆ ಮರು ಎಂಟ್ರಿ ಪಡೆಯುತ್ತಿರುವ ಉಪ್ಪಿ ಸೆ.18ರ ತಮ್ಮ ಹುಟ್ಟುಹಬ್ಬದ ದಿನದಂದು ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ರಾಜಕೀಯಕ್ಕೆ ಎಂಟ್ರಿ ಪಡೆದಿದ್ದ ಉಪ್ಪಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭು ಎಂಬ ಪರಿಕಲ್ಪನೆಯಲ್ಲಿ ರಾಜಕೀಯಕ್ಕೆ ಎಂಬ ಪದಕ್ಕೆ ವಿರುದ್ದವಾಗಿ ‘ಪ್ರಜಾಕೀಯ’ ಘೋಷಣೆಯೊಂದಿಗೆ ರಾಜಕೀಯ ಪಕ್ಷ ಹುಟ್ಟು ಹಾಕಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ (ಕೆಪಿಜೆಪಿ) ಮೂಲಕ ರಾಜಕಾರಣದ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಅಷ್ಟೇ ಅಲ್ಲದೆ ವಿಧಾನಸಭೆ ಚುನಾವಣೆ ವೇಳೆ ತಾವು ಸಮೇತ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿಕೊಂಡಿದ್ದರು. ಆದರೆ, ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಅವರೊಂದಿಗಿನ ಮನಸ್ತಾಪದಿಂದಾಗಿ ಮಾ. 5ರಂದು ಪಕ್ಷ ತೊರೆದಿದ್ದರು.
ಆದ್ರೆ ಇದೀಗ ಮತ್ತೆ ರಾಜಕೀಯದತ್ತ ಮುಖ ಮಾಡಿರುವ ಉಪೇಂದ್ರ ತಮ್ಮ ಹುಟ್ಟುಹಬ್ಬದ ದಿನ ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ. ಸೆ.18ರಂದು ಪ್ರಜಾಕೀಯ ಪರಿಕಲ್ಪನೆಯೊಂದಿಗೆ "ಉತ್ತಮ ಪ್ರಜಾಕೀಯ ಪಾರ್ಟಿ"ಯನ್ನು (ಯುಪಿಪಿ) ಲೋಕಾರ್ಪಣೆ ಮಾಡಲಿದ್ದಾರೆ. ಈ ಬಗ್ಗೆ ಸೆ. 18ರಂದು ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ. ಕೆಪಿಜೆಪಿಯಿಂದ ಹೊರನಡೆದ ಬಳಿಕ ನಟ ಉಪ್ಪಿ,’ ಉತ್ತಮ ಪ್ರಜಾಕೀಯ ಪಕ್ಷ ’ ಎನ್ನುವ ಹೆಸರನ್ನು ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಾಯಿಸಿದ್ದರು.
ಈ ಹಿಂದೆ ಹೇಳಿದಂತೆ ಅವರು ಪ್ರಜಾಕೀಯ ಕಲ್ಪನೆಯಲ್ಲಿಯೇ ಈ ಪಕ್ಷದ ಸಿದ್ದಾಂತಗಳು ಕೂಡಾ ಇರಲಿದ್ದು , ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಸಂದರ್ಶನ ಮತ್ತು ಅವರ ಕ್ಷೇತ್ರದಲ್ಲಿರುವ ಸಮಸ್ಯೆ ಕುಂದು ಕೊರತೆಗಳೇನು, ಅದಕ್ಕೆ ಪರಿಹಾರ ಎನ್ನುವ ಸಂಕ್ಷಿಪ್ತ ವರದಿಯನ್ನು ಆಧರಿಸಿ ಪಕ್ಷವನ್ನು ಕಟ್ಟುವ ಇರಾದೆ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಇವರ ಪಕ್ಷಕ್ಕೆ ಕನ್ನಡ ಚಿತ್ರತಾರೆಯರು, ಉಪೇಂದ್ರ ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ.