ಬೆಂಗಳೂರು ಸೆ 16 (MSP):ಬಂಡಾಯ ಹಾಗೂ ಸಂಪುಟ ವಿಸ್ತರಣೆಯ ಕಾರಣದಿಂದ ಕುದಿಯುತ್ತಿರುವ ಕಾಂಗ್ರೆಸ್ ತೆರೆಮರೆಯ ರಾಜಕೀಯದ ಅಖಾಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ರೀ ಎಂಟ್ರಿ ಕೊಡಲಿದ್ದಾರೆ. ಅಲ್ಲದೆ ಅತ್ತ ಕಡೆ ಪರಿಸ್ಥಿತಿಯ ನಿಯಂತ್ರಣಕ್ಕಾಗಿ ರಾಜ್ಯ ಕಾಂಗ್ರೆಸ್ ಉಸ್ತುವರಿ ಕೆ,ಸಿ ವೇಣು ಗೋಪಾಲ್ ಅವರನ್ನು ಕಾಂಗ್ರೆಸ್ ನ ಹೈಕಮಾಂಡ್ ಶನಿವಾರ ರಾತ್ರಿಯೇ ಬೆಂಗಳೂರಿಗೆ ಕಳುಹಿಸಿಕೊಟ್ಟಿದೆ.
ಇತ್ತ ಕಡೆ ಸಮ್ಮಿಶ್ರ ಸರ್ಕಾರದ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿಯ ಲಾಭ ಪಡೆದುಕೊಂಡಿರುವ ಬಿಜೆಪಿ ತನ್ನದೇ ಗೇಮ್ ಪ್ಲಾನ್ ರೂಪಿಸಿದೆ. ಆಪರೇಷನ್ ಕಮಲದ ಬಗ್ಗೆ ಸಾಕಷ್ಟು ವಿರೋಧಗಳು ಕೇಳಿ ಬರುತ್ತಿದ್ದರೂ, ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗೂ ತಮಗೂ ಯಾವುದೇ ರೀತಿಯ ಸಂಬಂಧ ಇಲ್ಲದಂತೆ ತಟಸ್ಥ ದೋರಣೆ ಮೂಲಕ ಸರ್ಕಾರವನ್ನು ಬೀಳಿಸುವ ಲೆಕ್ಕಾಚಾರ ಬಿಜೆಪಿ ನಾಯಕರದ್ದು ಎನ್ನಲಾಗುತ್ತಿದೆ. ಇದೇ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವಿರತ ಕಾರ್ಯಾಚರಣೆ ನಡೆಸುತ್ತಿದ್ದು, 20ಕ್ಕೂ ಹೆಚ್ಚು ಶಾಸಕರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಬಿಜೆಪಿಯಲ್ಲಿ ಇದೀಗ ಗಂಭೀರವಾಗಿ ಚರ್ಚೆಯಾಗುತ್ತಿದೆ.
ಕಾಂಗ್ರೆಸ್ ವಲಯದಲ್ಲಿ ಅಪರೇಷನ್ ಕಮಲ ಭೀತಿ ಒಂದೆಡೆಯಾದರೆ ವಿದೇಶಿ ಟೂರ್ ಮುಗಿಸಿ ಆಗಮಿಸುತ್ತಿರುವ, ಸಿದ್ದು ರೀ ಎಂಟ್ರೀ ರಾಜ್ಯ ರಾಜಕಾರಣದಲ್ಲಿ ತರ್ಕಕ್ಕೆ ನಿಲುಕದ ಬೆಳವಣಿಗೆಗಳು ನಡೆಯಬಹುದು ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಫ್ರಾನ್ಸ್ ನಿಂದ ಬೆಂಗಳೂರಿಗೆ ಬಂದಿಳಿದಿದ್ದ, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನ ಅತೃಪ್ತ ಕೆಲ ಶಾಸಕರು ಭೇಟಿ ಮಾಡಿ ಅಳಲು ತೋಡಿಕೊಳ್ಳಲಿದ್ದಾರೆ.
ಒಂದು ವೇಳೆ 20ಕ್ಕೂ ಹೆಚ್ಚು ಶಾಸಕರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ರೆ ಈ ಎಲ್ಲ ಬೆಳವಣಿಗೆಯಲ್ಲಿ ಬಿಜೆಪಿಯ ಯಾವುದೇ ಪಾತ್ರ ಇಲ್ಲ ಎನ್ನುವುದನ್ನು ಬಿಂಬಿಸುವಂತೆ ಬಿಜೆಪಿ ಹೈಕಮಾಡ್ ಸೂಚಿಸಿದೆ, ಒಂದು ವೇಳೆ ಸರ್ಕಾರ ಪತನವಾದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಏಕ ಪಕ್ಷೀಯ ನಿರ್ಧಾರ ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಎರಡೂ ಪಕ್ಷಗಳಲ್ಲಿನ ಹೊಂದಾಣಿಕೆ ಕೊರತೆಯಿಂದ ಸರ್ಕಾರ ಪತನವಾಯಿತು ಎಂಬ ಕಾರಣವನ್ನು ಬಿಂಬಿಸುವಂತೆ ಬಿಜೆಪಿ ರಾಷ್ಟ್ರೀಯ ನಾಯಕರು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.