ಮಂಗಳೂರು, ಸೆ 15(SM): ಕವಿತೆ ಅನ್ನೋದನ್ನು ಯಾರೂ ಅಷ್ಟು ಹಗುರವಾಗಿ ತೆಗೆದುಕೊಳ್ಳಬಾರದು. ಅದಕ್ಕೆ ತನ್ನದೇ ಆದ ಆಯಾಮಗಳಿವೆ. ರಸಧಾರೆ ಹರಿಸುವ ಮುನ್ನ ಆಯಾ ಮಜಲುಗಳನ್ನು ಕವಿ ಸಮಗ್ರವಾಗಿ ಯೋಚಿಸಿ ಅದನ್ನು ಬರೆಯಬೇಕಾಗುತ್ತದೆ. ಹೀಗಿದ್ದಾಗ ಅದು ತೀರಾ ಅಪಾಯಕಾರಿಯಾಗುವುದನ್ನು ತಪ್ಪಿಸಬಹುದಾಗಿದೆ. ಗೀತೆ ಅನ್ನೋದು ಜೀವನದ ದಾರಿ ಎಂದು ಗುಜರಾತಿ ಕವಿ ಮತ್ತು ಸಾಹಿತಿ ಪ್ರಬೋದ್ ಪಾರಿಖ್ ಹೇಳಿದ್ದಾರೆ. ಕೊಂಕಣಿ ಕಾವ್ಯ ಕ್ಷೇತ್ರದ ಹಿರಿಮೆಗಾಗಿ ದುಡಿಯುತ್ತಿರುವ ಕವಿತಾ ಟ್ರಸ್ಟ್ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ಏಳನೇ ವರ್ಷದ ಜೇಮ್ಸ್ ಮತ್ತು ಶೋಭಾ ಮೆಂಡೊನ್ಸಾ ಕವಿತಾ ದತ್ತಿ ಉಪನ್ಯಾಸದಲ್ಲಿ ಅವರು ಉಪನ್ಯಾಸ ನೀಡಿದರು.
ಕವಿತೆಯೊಂದನ್ನು ಬರೆಯುವಾಗ ಅದರ ಪ್ರತಿಫಲನಗಳು ಹಲವಾರು. ಕವಿಯೊಬ್ಬನ ಎಲ್ಲಾ ಸಂಭಾಷಣೆಗಳೂ ಹೃದಯದಲ್ಲಿ, ಸಂತೋಷ ಮತ್ತು ದುಃಖಗಳನ್ನು ತಂದೊಡ್ಡುವ ಸಾಧ್ಯತೆಯೂ ಇದೆ. ಬರೆದ ಎಲ್ಲಾ ಕವಿತೆಗಳೂ ಎಲ್ಲರಿಗೂ ಉತ್ತಮ ಎಂದು ಹೇಳಲಾಗದು. ಆದರೆ ಬರೆದ ಕವಿತೆಯನ್ನು ಎಲ್ಲರೂ ಇಷ್ಟಪಡಬೇಕೆಂದು ಕವಿಯಾದವ ಬಯಸುತ್ತಾನೆ ಎಂದು ತಿಳಿಸಿದರು. ಇನ್ನು ಇದೇ ಸಂದರ್ಭ ಅವರು ಹಿಂದಿ ಭಾಷೆಯನ್ನೂ ಬಳಕೆ ಮಾಡುತ್ತಾ ತನ್ನ ಉಪನ್ಯಾಸವನ್ನು ಸ್ವಾರಸ್ಯಕರವಾಗಿ ವರ್ಣಿಸಿದರು. ಅವರ ಹಾಸ್ಯಪ್ರಜ್ಞೆ ಎಲ್ಲರನ್ನು ನಗೆಕಡಲಲ್ಲಿ ತೇಲಿಸಿತು. ಕವಿತಾ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಮೆಲ್ವಿನ್ ರೋಡ್ರಿಗಸ್, ಅಧ್ಯಕ್ಷ ಕಿಶೋರ್ ಗೊನ್ಸಾಲ್ವೇಸ್, ಟ್ರಸ್ಟಿ ವಿಲಿಯಂ ಪಾಯಸ್ ಅವರು ‘ಲ್ಯಾಂಡ್ ಕಾಲ್ಡ್ ಸೌತ್ ಕೆನರಾ’ ಕೃತಿಯನ್ನು ಪ್ರಬೋದ್ ಪಾರೀಖ್ಗೆ ಕೊಡುಗೆಯಾಗಿ ನೀಡುವ ಮೂಲಕ ಗೌರವಿಸಿದರು. ಬಸ್ತಿ ವಾಮನ್ ಶೆಣೈ, ಶೋಭಾ ಮೆಂಡೊನ್ಸಾ, ಸೈಂಟ್ ಆಗ್ನೇಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಜೆಸ್ವಿನಾ ಎಸಿ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕಿ ಮಾಲಿನಿ ಹೆಬ್ಬಾರ್ ನಿರೂಪಿಸಿದರು.