ಬೆಂಗಳೂರು, ಸೆ15(SS): ಜನಪದ ಕ್ರೀಡೆ ಕಂಬಳಕ್ಕೆ ಅನುಮತಿ ನೀಡಿದ್ದಕ್ಕೆ ತಡೆ ನೀಡಬೇಕು ಎಂದು ಮತ್ತೊಮ್ಮೆ ಪೆಟಾ ಮನವಿ ಸಲ್ಲಿಸಿದೆ. ರಾಜ್ಯ ಸರಕಾರದ ಕಾಯ್ದೆಯನ್ನು ತಿರಸ್ಕರಿಸಬೇಕು ಎಂದು ಪ್ರಾಣಿ ದಯಾ ಸಂಘ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ರಾಜ್ಯ ಸರಕಾರದ ಹೊಸ ಕಾನೂನಿನಿಂದ ಪ್ರಾಣಿಗಳ ಮೇಲೆ ಕ್ರೌರ್ಯ ತಡೆಯುವ 1960 ಕಾಯ್ದೆಯ ಗುರಿ ಮತ್ತು ಉದ್ದೇಶಕ್ಕೆ ವಿರುದ್ಧವಾಗಿದೆ. ಪ್ರಾಣಿಗಳಿಗೆ ಅನಗತ್ಯವಾಗಿ ನೋವು ಮತ್ತು ವೇದನೆಯಿಂದ ತಡೆಯಬೇಕೆಂಬುದು ಕೇಂದ್ರ ಸರಕಾರದ ಕಾಯ್ದೆಯ ಉದ್ದೇಶ ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ಪೆಟಾ ಸಲ್ಲಿಸಿರುವ ಮರು ಅರ್ಜಿಯಲ್ಲಿ ತಿಳಿಸಿದೆ. ಅಲ್ಲದೆ, ಇದು ಪ್ರಾಣಿಗಳ ಹಕ್ಕಿನ ಉಲ್ಲಂಘನೆಯಾಗಿದ್ದು, ಸಾಂವಿಧಾನಿಕ ವಿರೋಧಿಯಾಗಿದೆ ಎಂದು ಹೇಳಿದೆ.
ಈ ಹಿಂದೆಯೂ ಪೆಟಾ ಕಂಬಳ ನಿಲ್ಲಿಸಲು ಮನವಿ ಮಾಡಿತ್ತು. ಆದರೆ ಜನರ ಒತ್ತಾಯಕ್ಕೆ ಮಣಿದು ಕರ್ನಾಟಕದ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಆದರೆ ಇದೀಗ ತುಳುನಾಡಿನ ವೀರ ಕ್ರೀಡೆ ಕಂಬಳ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.