ಮಂಗಳೂರು, ಏ13 (DaijiworldNews/MS): ಜನತಾ ಕಾಲೋನಿಯ ಜುಮ್ಮಾ ಮಸೀದಿಗೆ ಕಲ್ಲು ಬಿಸಾಕಿ ಕಿಟಕಿಯ ಗಾಜು ಒಡೆದ ಘಟನೆಗೆ ಸಂಬಂಧಿಸಿದಂತೆ, ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ಏ.12 ರ ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಏ.4 ರಂದು ಮುಂಜಾನೆ 2.40 ರ ವೇಳೆಗೆ ಇಡ್ಯಾ ಗ್ರಾಮದ ಜನತಾ ಕಾಲೋನಿಯಲ್ಲಿರುವ ಜುಮ್ಮಾ ಮಸೀದಿಗೆ ಕಲ್ಲು ಬಿಸಾಕಿ ಪರಾರಿಯಾಗಿದ್ದರು. ಮಸೀದಿಯ ಕಟ್ಟಡಕ್ಕೆ ಹಾನಿ ಎಸಗಿದ ಬಗ್ಗೆ ದೂರು ದಾಖಲಿಸಲಾಗಿತ್ತು.
ಆರೋಪಿಗಳನ್ನು ಶೀಘ್ರ ಪತ್ತೆ ಮಾಡುವಂತೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಸುರತ್ಕಲ್ ನಿರೀಕ್ಷಕ ಮತ್ತು ಉಪ ನಿರೀಕ್ಷಕರ ನೇತೃತ್ವದ ತನಿಖಾ ತಂಡಕ್ಕೆ ಆದೇಶಿಸಿದ್ದರು. , ಮಸೀದಿ ಹಾಗೂ ಜನತಾ ಕಾಲೋನಿಯ ಪರಿಸರದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಮೂಲಕ ಸಿಕ್ಕ ಸುಳಿವು ಆಧಾರಿಸಿ ಆರೋಪಿಗಳ ಮಾಹಿತಿ ಕಲೆಹಾಕಿದ ತನಿಖಾ ತಂಡ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.
ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದಾರೆ.