ಮಂಗಳೂರು, ಏ.12 (DaijiworldNews/MB) : ಧಾರಿಣಿ ಕುಂದಾಪುರ, ದಾಯ್ಜಿವರ್ಲ್ಡ್ ಟಿವಿ 24×7 ನಲ್ಲಿ ಪ್ರಸಾರವಾದ 'ಫೋನ್-ಇನ್ ಸಂಗೀತ ತಾರೆ' ಮೊದಲ ಸೀಝನ್ ವಿಜೇತೆಯಾಗಿದ್ದಾರೆ. ಫಲಿತಾಂಶವನ್ನು ಏಪ್ರಿಲ್ 10 ರಂದು ಪ್ರಕಟಿಸಲಾಗಿದೆ.
ಉಡುಪಿಯ ಲಿಶಾ ಕೊಕ್ಕರ್ಣೆ ಮೊದಲ ರನ್ನರ್ ಅಪ್ ಆಗಿದ್ದು, ರಿಯಾ ರಂಜಿತ್ ಎರಡನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ವಿಜೇತೆಗೆ 50,000 ರೂ ಬಹುಮಾನ, ಮೊದಲ ರನ್ನರ್ ಅಪ್ ಆದವರಿಗೆ 30,000 ರೂ. ಹಾಗೂ ಎರಡನೇ ರನ್ನರ್ ಅಪ್ಗೆ 20,000 ರೂ. ರೂಪಾಯಿ ಬಹುಮಾನವಿದೆ.
ವಾಹಿನಿಯಲ್ಲಿ 'ಫೋನ್-ಇನ್ ಸಂಗೀತ ತಾರೆ' ಕಾರ್ಯಕ್ರಮವು ವೀಕ್ಷಕರಿಗೆ ಬಹಳ ವಿಶಿಷ್ಟವಾದ ಪರಿಕಲ್ಪನೆಯಾಗಿತ್ತು. ಈ ಕಾರ್ಯಕ್ರಮವು 11 ತಿಂಗಳ ಹಿಂದೆ ಪ್ರಾರಂಭವಾಗಿದ್ದು ಪ್ರತಿ ಶನಿವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿತ್ತು. ಹಾಗೆಯೇ ಪ್ರೇಕ್ಷಕರ ಹೃದಯದಲ್ಲಿ ಒಂದು ಸ್ಥಾನವನ್ನು ಪಡೆದಿತ್ತು. ದೂರವಾಣಿ ಕರೆಯ ಮೂಲಕ ಗಾಯಕರು ಹಾಡುವ ಹಾಡಿಗೆ ಟಿವಿ ಸ್ಟುಡಿಯೋದಲ್ಲಿ ಕುಳಿತು ತೀರ್ಪುಗಾರರು ಪ್ರತಿಕ್ರಿಯೆ ನೀಡುವಂತಹ ರಿಯಾಲಿಟಿ ಟಿವಿ ಕಾರ್ಯಕ್ರಮ ಹಿಂದೆಂದೂ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿರಲಿಲ್ಲ. ಇದು ಮೊಟ್ಟ ಮೊದಲ ಯಶಸ್ವಿ ಕಾರ್ಯಕ್ರಮವಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಜನರಲ್ಲಿ ಉತ್ಸಾಹ ತುಂಬಿದ ಈ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತು.
ಅಂತಿಮ ಸುತ್ತಿನ 16 ಸ್ಪರ್ಧಿಗಳ ಆಯ್ಕೆಗೂ ಮುನ್ನ ಸುಮಾರು 400 ಸ್ಪರ್ಧಿಗಳು ಈ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದಾಯ್ಜಿವರ್ಲ್ಡ್ ಸ್ಟುಡಿಯೋದಲ್ಲಿಯೇ ಹಾಡಬೇಕಾದ ಎರಡು ತಿಂಗಳುಗಳ ಕಾಲ ಸ್ಪರ್ಧೆಯು ಟಾಪ್ 16 ಸ್ಪರ್ಧಿಗಳ ನಡುವೆ ನಡೆಯಿತು.
ಮೊಹಮ್ಮದ್ ಇಕ್ಬಾಲ್ ಕಾಟಿಪಳ್ಳ ಹಾಗೂ ಸೌಮ್ಯಾ ಭಟ್ ಅವರು 'ಫೋನ್-ಇನ್ ಸಂಗೀತ ತಾರೆ' ಗೌರವಾನ್ವಿತ ತೀರ್ಪುಗಾರರಾಗಿದ್ದರು. ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಕಾರ್ಯಕ್ರಮವನ್ನು ನಿರೂಪಿಸಿದ್ದರು.