ಬಂಟ್ವಾಳ, ಸೆ15(SS): ರಾಜ್ಯ ಸರಕಾರ ಸುಭದ್ರವಾಗಿದ್ದು ಐದು ವರ್ಷ ಬಾಳುತ್ತದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ತಾಪಂ ಸಭಾಂಗಣದಲ್ಲಿ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದ ಬಳಿಕ ಅಧಿಕಾರಿಗಳೊಂದಿಗೂ ಖಾದರ್ ಮಾತನಾಡಿದ್ದಾರೆ. ಭೂಪರಿವರ್ತನೆ ಮತ್ತು ದಾಖಲೀಕರಣ ಸೇರಿದಂತೆ ಇತರ ಯಾವುದೇ ವಿಷಯಗಳಿಗೆ ಸಂಬಂಧಿಸಿ ಜನರಿಗೆ ಸಮಸ್ಯೆಗಳು ಬಾರದೇ ಇರುವಂತೆ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.
ಹಕ್ಕುಪತ್ರ ವಿತರಣೆಗೆ ಫಲಾನುಭವಿಗಳ ಆಯ್ಕೆ ಸಂದರ್ಭ ಕೆಲವರಿಗೆ ಕೊಟ್ಟು, ಕೆಲವರಿಗೆ ಕೊಡದೇ ಇದ್ದರೆ ಅದು ಬೇರೆ ಅರ್ಥಗಳಿಗೆ ಕಾರಣವಾಗುತ್ತದೆ. ಇದನ್ನು ಸರಿಯಾಗಿ ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಬಾಪೂಜಿ ಸೇವಾ ಕೇಂದ್ರಗಳಿದ್ದರೂ ಸರಿಯಾದ ಕೆಲಸವನ್ನು ನಿರ್ವಹಿಸಲು ಆಗುತ್ತಿಲ್ಲ. ಅಲ್ಲಿ ಹಲವು ಸಮಸ್ಯೆಗಳಿವೆ ಎಂಬುದನ್ನು ತುಂಬೆ ಗ್ರಾಮ ಪಂಚಾಯತಿಗೆ ಒಳಪಟ್ಟ ನಾಗರಿಕರು ಖಾದರ್ ಗಮನಕ್ಕೆ ತಂದರು. ಈ ಕುರಿತು ಅಧಿಕಾರಿಗಳನ್ನು ವಿಚಾರಿಸಿದ ಖಾದರ್, ತ್ವರಿತ ಸೇವೆಗೋಸ್ಕರ ಬಾಪೂಜಿ ಸೇವಾ ಕೇಂದ್ರಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪಿಸಲಾಗಿದ್ದರೂ ಕೆಲಸವಾಗದೇ ಇರುವುದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರು.
ಮಾತ್ರವಲ್ಲ, ಅಧಿಕಾರಿಗಳು, ಜನಪ್ರತಿನಿಧಿಗಳು ಹೊಂದಾಣಿಕೆಯಿಂದ ಜನರಿಗೆ ಬೇಕಾದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಖಾದರ್ ಹೇಳಿದರು.
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಅವರು ಅಂಬೇಡ್ಕರ್ ಸಿದ್ಧಾಂತಗಳಲ್ಲಿ ನಂಬಿಕೆ ಇದ್ದವರು. ಅವರು ಸರಕಾರದ ಪರವಾಗಿಯೇ ಇದ್ದಾರೆ. ಹಾಗಾಗಿ ನಮ್ಮ ಸರ್ಕಾರ ಐದು ವರ್ಷ ಬಾಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.