ಕುಂದಾಪುರ, ಸೆ 15(SM): ಸಂಬಂಧಿಕರ ಮನೆಯಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ವಾಪಾಸ್ಸಾಗುತ್ತಿದ್ದಾಗ ಸ್ಕೂಟರ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕುಂದಾಪುರ ತಾಲೂಕಿನ ವಂಡ್ಸೆ ಮೂಲದ ತಾಯಿ ಹಾಗೂ ಮಗಳು ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ಹೆಬ್ಬಾಳದ ಲುಂಬಿಣಿ ಗಾರ್ಡನ್ ಎದುರು ನಡೆದಿದೆ.
ಮೂರು ವರ್ಷದ ಮಗು ಆರಾಧ್ಯ ಹಾಗೂ ಆಕೆಯ ತಾಯಿ ಸುರೇಖಾ(30) ಮೃತಪಟ್ಟವರು. ಸೆಪ್ಟೆಂಬರ್ ೧೪ರ ಗುರುವಾರ ರಾತ್ರಿ ೧೧ ಗಂಟೆ ಸುಮಾರಿಗೆ ಹೆಬ್ಬಾಳದ ಲುಂಬಿಣಿ ಗಾರ್ಡನ್ ಎದುರು ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಸುರೇಖಾ ಪತಿ ರಘು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುಟುಂಬ ಬೆಂಗಳೂರಿನ ಸಿಬಿಐ ಕಚೇರಿ ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿತ್ತು. ರಘು ಮನೆ ಸಮೀಪವೇ ಬೇಕರಿ ಇಟ್ಟುಕೊಂಡಿದ್ದರು. ಬ್ಯಾಟರಾಯನಪುರದಲ್ಲಿರುವ ಸಂಬಂಧಿಕರು, ಗಣೇಶ ಹಬ್ಬದ ಪ್ರಯುಕ್ತ ಪೂಜೆಗೆ ಆಹ್ವಾನಿಸಿದ್ದರು. ಮಗಳನ್ನು ಕರೆದುಕೊಂಡು ಸಂಜೆ ದಂಪತಿ ಪೂಜೆಗೆ ತೆರಳಿದ್ದು, ಅಲ್ಲೇ ಊಟ ಮುಗಿಸಿಕೊಂಡು ೧೧ ಗಂಟೆಗೆ ಮನೆಗೆ ವಾಪಸಾಗುತ್ತಿದ್ದರು.
ಈ ಪ್ರದೇಶಕ್ಕೆ ಹೊಸಬರಾದ ರಘು ಅವರಿಗೆ ರಸ್ತೆಗಳ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಸರ್ವಿಸ್ ರಸ್ತೆಯಲ್ಲಿ ಸಾಗುವ ಬದಲು ಅವರು ಹೆಬ್ಬಾಳ ಮೇಲ್ಸೇತುವೆ ಏರಿದ್ದರು. ಸ್ವಲ್ಪ ದೂರ ಸಾಗಿದ ಬಳಿಕ ತಾವು ದಾರಿ ತಪ್ಪಿರುವುದು ಅವರ ಗಮನಕ್ಕೆ ಬಂದಿತ್ತು. ಹೀಗಾಗಿ, ಆಟೋ ಚಾಲಕರೊಬ್ಬರ ಬಳಿ ಮಾಹಿತಿ ಪಡೆದು, ವೀರಣ್ಣನಪಾಳ್ಯ ಜಂಕ್ಷನ್ನಲ್ಲಿ ತಿರುವು ಪಡೆದುಕೊಂಡಿದ್ದರು. ಲುಂಬಿಣಿ ಗಾರ್ಡನ್ ಎದುರು ಬರುತ್ತಿದ್ದಂತೆ ಯಾವುದೋ ವಾಹನ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ರಸ್ತೆ ಮಧ್ಯೆ ಬಿದ್ದ ತಾಯಿ-ಮಗಳ ತಲೆ ಮೇಲೆ ವಾಹನದ ಚಕ್ರ ಹರಿದಿದ್ದರಿಂದ, ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ರಘು ರಸ್ತೆ ಬದಿಗೆ ಉರುಳಿದಾಗ ತಲೆಗೆ ಪಾದಚಾರಿ ಮಾರ್ಗದ ಕಲ್ಲು ಬಡಿದಿದ್ದರಿಂದ ಅವರೂ ಪ್ರಜ್ಞೆ ತಪ್ಪಿದರು. ಬೇರೆ ವಾಹನಗಳ ಸವಾರರು ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತಯಿ ಮಗುವನ್ನು ಉಳಿಸುವಲ್ಲಿ ವಿಫಲರಾಗಿದ್ದಾರೆ. ಇನ್ನು ಅಪಘಾತ ಮಾಡಿದ ವಾಹನದ ಬಗ್ಗೆ ಯಾವುದು ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ.