ಕುಂದಾಪುರ, ಸೆ 14(SM): ಆರು ಜನರ ತಂಡವೊಂದು ಅಂಗಡಿಗೆ ನುಗ್ಗಿ ಅಂಗಡಿ ಮಾಲೀಕನಿಗೆ ಹಲ್ಲೆ ನಡೆಸಿ, ಸಿಸಿ ಟಿವಿ ಹಾನಿಗೆಡವಿದ್ದು ಮಾತ್ರವಲ್ಲದೆ, ದರೋಡೆ ನಡೆಸಿ ಪರಾರಿಯಾದ ಘಟನೆ ಕುಂದಾಪುರದ ತೆಕ್ಕಟ್ಟೆಯಲ್ಲಿ ನಡೆದಿದೆ. ಗಾಯಗೊಂಡ ಅಂಗಡಿ ಮಾಲಕನನ್ನು ಉಳ್ತೂರು ಕಟ್ಟೆಮನೆ ನಿವಾಸಿ, ತೆಕ್ಕಟ್ಟೆಯಲ್ಲಿ ಎಸ್.ಎಂ. ಎಂಟರ್ ಪ್ರೈಸಸ್ ನ ಕೃಷ್ಣಮೂರ್ತಿ ಕೊಠಾರಿ ಎಂದು ಗುರುತಿಸಲಾಗಿದೆ.
ಕೃಷ್ಣಮೂರ್ತಿ ಕೊಠಾರಿ ತಮ್ಮ ಅಂಗಡಿಯಲ್ಲಿದ್ದ ಸಂದರ್ಭ ಸಂಜೆ 7.30ರ ಸುಮಾರಿಗೆ ಆರೋಪಿಗಳಾದ ಸುದೀಪ್ ಶೆಟ್ಟಿ, ಬಟ್ಲರ್ ಸಂತೋಷ್ ಯಾನೆ ಸಂತು, ಹರೀಶ್, ಶಶಿ, ಗಿರೀಶ್ ಹಾಗೂ ಸಂದೇಶ್ ಎಂಬುವರು ಕೃಷ್ಣ ಮೂರ್ತಿಯವರ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಬಳಿಯಿದ್ದ ಬಂಗಾರದ ಸರವನ್ನು ಕಿತ್ತುಕೊಂಡಿದ್ದಾರೆ. ಈ ಸಂದರ್ಭ ಎಳೆದಾಟ ನಡೆದಿದ್ದು, ಅರ್ಧ ಸರವನ್ನು ದುಷ್ಕರ್ಮಿಗಳ ಪಾಲಾಗಿದೆ. ಅಲ್ಲದೇ ನಗದು ಹೊಂದಿದ್ದ ಡ್ರಾವರ್ ಗೆ ಕೈಹಾಕಿ ಹಣ ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡಿರುವ ಕೃಷ್ಣಮೂರ್ತಿ ಕೊಠಾರಿಯವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.