ಕುಂದಾಪುರ, ಸೆ 14(SM): ತಮಿಳುನಾಡಿನಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಕುಂದಾಪುರ ಮೂಲಕ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಸೆಪ್ಟೆಂಬರ್ ೧೪ರ ಶುಕ್ರವಾರ ಮಧ್ಯಾಹ್ನ ನಡೆದಿದೆ. ದುರ್ಗಾಂಬಾ ಟ್ರಾನ್ಸಿಟ್ ನ ಮಾಲಕ ಸುನಿಲ್ ಚಾತ್ರ ಮೃತಪಟ್ಟ ವ್ಯಕ್ತಿ.
ಗುರುವಾರ ಕುಂದಾಪುರದಲ್ಲಿ ಕುಟುಂಬ ಸದಸ್ಯರೊಂದಿಗೆ ಗಣೇಶ್ ಚೌತಿ ಸಂಭ್ರಮವನ್ನು ಆಚರಿಸಿಕೊಂಡಿದ್ದ ಅವರು ಶುಕ್ರವಾರ ಕರೂರ್ ಬಳಿಯ ಕಂಪೆನಿಯಲ್ಲಿ ಸಿದ್ದಗೊಳ್ಳುತ್ತಿದ್ದ ತಮ್ಮ ಹೊಸ ಬಸ್ಸುಗಳ ವೀಕ್ಷಣೆಗೆಂದು ಚಾಲಕನೊಂದಿಗೆ ತಮ್ಮ ಫಜಿರೋ ವಾಹನದಲ್ಲಿ ತೆರಳಿದ್ದರು. ಕರೂರು ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ರಸ್ತೆಯಿಂದ ಹೊರಕ್ಕೆ ಉರುಳಿ ಬದಿಯಲ್ಲಿನ ತಡೆಗೋಡೆಗೆ ಅಪ್ಪಳಿಸಿದೆ. ಈ ವೇಳೆ ತಲೆಗೆ ತೀವೃವಾದ ಪೆಟ್ಟು ಬಿದ್ದು ಉಂಟಾದ ರಕ್ತ ಸ್ರಾವದಿಂದಾಗಿ ಸುನೀಲ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಉತ್ತರ ಭಾರತದ ಮೂಲದ ಚಾಲಕನಿಗೂ ಅಪಘಾತದಿಂದಾಗಿ ತೀವೃವಾದ ಗಾಯಗಳುಂಟಾಗಿದ್ದು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ. ಆತನ ಪರಿಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಹೆದ್ದಾರಿಯಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ಅಡ್ಡವಾಗಿ ಬಂದ ಸೈಕಲ್ ಸವಾರರೋರ್ವನ ರಕ್ಷಣೆಗಾಗಿ ಆಕಸ್ಮಿಕವಾಗಿ ಬ್ರೇಕ್ ಹಾಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದೆ ಎಂದು ಹೇಳಲಾಗಿದೆ.