ಉಡುಪಿ, ಏ.11 (DaijiworldNews/MB) : ಇಶಾ ಪ್ರತಿಷ್ಠಾನದ ಜಗ್ಗಿ ವಾಸುದೇವ ಗುರೂಜಿಯವರ ತಮಿಳುನಾಡಿನ ದೇವಾಲಯಗಳನ್ನು ಸರಕಾರಿ ನಿಯಂತ್ರಣದಿಂದ ಮುಕ್ತಗೊಳಿಸಿ #Free TNTemples ಎನ್ನುವ ಚಳುವಳಿಗೆ ಉಡುಪಿ ಅಷ್ಟಮಠದ ಸ್ವಾಮಿಜಿಗಳಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಟ್ವಿಟ್ಟರ್ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
''ಹಿಂದೂ ಸಮುದಾಯದಲ್ಲಿ ಮಾತ್ರವಲ್ಲ ಜಗತ್ತಿನ ಆಧ್ಯಾತ್ಮ ಸಮುದಾಯದಲ್ಲಿ ಏಕತೆಯ ನಿರ್ಮಾಣದ ಅಗತ್ಯವಿದ್ದು ಎಂದೋ ಆಂದೋಲನ ಆಗಬೇಕಿತ್ತು, ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸರಕಾರದ ಹಸ್ತಕ್ಷೇಪ ಮಿತಿ ಮೀರಿದ್ದು ಸಮಾಜವನ್ನು ತಪ್ಪು ಹಾದಿಗೆಳೆಯುತ್ತಿದೆ'' ಎಂದು ಅವರು ಟ್ವೀಟ್ ಮಾಡಿದ್ದಾರೆ.
''ಪ್ರಾಚೀನ ದೇವಳಗಳ ಸಂಪತ್ತಿನ ಲೂಟಿ ಒಂದೆಡೆಯಾದರೆ ದೇವಳಗಳ ನಿಧಿಯನ್ನು ಅಧಾರ್ಮಿಕ ಕೆಲಸಗಳಿಗೆ ಬಳಸಲಾಗುತ್ತಿದೆ. ದೇವಳಗಳ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಹರಾಜು ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಗ್ಗಿ ವಾಸುದೇವ್ ರೂಪಿಸಿದ ಚಳವಳಿಗೆ ತಮ್ಮ ಬೆಂಬಲವಿದ್ದು ತಮಿಳುಡಿನಲ್ಲಿ ಕ್ರಾಂತಿ, ಸುಧಾರಣೆಗಳಾಗಲಿ'' ಎಂದು ಪುತ್ತಿಗೆ ಸ್ವಾಮೀಜಿಯವರು ಆಶಿಸಿದ್ದಾರೆ.
ಇನ್ನು ಪರ್ಯಾಯ ಅದಮಾರು ಮಠದ ಶ್ರೀಗಳಾದ ಈಶ ಪ್ರಿಯ ತೀರ್ಥ ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ''ನಮ್ಮ ಭಾರತದ ಗುರುತುಗಳಾಗಿರುವ ದೇವಸ್ಥಾನಗಳನ್ನು ರಕ್ಷಿಸಬೇಕು. ಹಾಗಾಗಿ ಜಗತ್ಫ್ಟಿನ ಒಳಿತಿಗಾಗಿ ಈ ಚಳುವಳಿಯಲ್ಲಿ ಭಾಗವಹಿಸಿ ಅಲ್ಲದೆ ನಾವು ಕೂಡ ಇಂತಹ ಚಳುವಳಿಯನ್ನು ನಮ್ಮ ನಮ್ಮ ರಾಜ್ಯದಲ್ಲಿ ಆರಂಭಿಸಬೇಕು'' ಎಂದಿದ್ದಾರೆ.
''ಮಂತ್ರಾಲಯಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ'' ಎಂದು ಶ್ರೀ ರಾಘವೇಂದ್ರ ಸ್ವಾಮೀಜಿ ಮಠದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ಬೆಂಬಲ ವ್ಯಕ್ತ ಪಡಿಸಿದ್ದಾರೆ.