ಶ್ರೀನಗರ, ಸೆ14(SS): ಒಂದೆಡೆ ಭಾರತೀಯರು ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿರುವಾಗಲೇ, ಕಾಶ್ಮೀರದಲ್ಲಿ ಹೆಮ್ಮೆಯ ಸೈನಿಕರು ಉಗ್ರರ ವಿರುದ್ಧ ಎನ್ಕೌಂಟರ್ ನಡೆಸಿ ಒಟ್ಟು 4 ಮಂದಿ ಉಗ್ರರ ತಲೆ ಉರುಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಾರತೀಯ ಸೇನೆ, ಸಿಆರ್ಪಿಎಫ್ ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ 4 ಉಗ್ರರನ್ನು ಹೊಡೆದುರುಳಿಸಿದ್ದಾರೆ. ಅಂತೆಯೇ ಗುಂಡಿನ ಚಕಮಕಿಯಲ್ಲಿ 9 ಯೋಧರು ಗಾಯಗೊಂಡಿದ್ದಾರೆ.
ಬಾರಾಮುಲ್ಲಾ ಎನ್ ಕೌಂಟರ್ ವೇಳೆ ಇಬ್ಬರು ಉಗ್ರರು ತಪ್ಪಿಸಿಕೊಂಡಿದ್ದು, ತಪ್ಪಿಸಿಕೊಂಡಿದ್ದ ಉಗ್ರರಿಗಾಗಿ ಸೇನೆ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ರಿಯಾಸಿ ಜಿಲ್ಲೆಯ ಕಕರಿಯಾಲ್ ಪ್ರದೇಶದ ಮನೆಯೊಂದರಲ್ಲಿ ಅಡಗಿದ್ದ ಉಗ್ರರನ್ನು ಹೊಡೆದುರುಳಿಸಲು ಭದ್ರತಾ ಪಡೆಗಳು ಗುರುವಾರ ಕಾರ್ಯಾಚರಣೆಯನ್ನು ನಡೆಸಿದ್ದರು.
ಈ ವೇಳೆ ಉಗ್ರರು ಭದ್ರತಾ ಸಿಬ್ಬಂದಿಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ, ಡಿಎಸ್ಪಿ ಮೋಹನ್ ಲಾಲ್ ಸೇರಿದಂತೆ ಐವರು ಸಿಆರ್ಪಿಎಫ್ ಯೋಧರು ಮತ್ತು ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಉಗ್ರರನ್ನು ಹೊಡೆದುರುಳಿಸಿದ್ದು ಮಾತ್ರವಲ್ಲದೆ ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ವಾತ್ಲಾಬ್ ಸೆಕ್ಟರ್ನ ಕಮಾಂಡರ್ ಬ್ರಿಗೇಡಿಯರ್ ವಿ ಹರಿಹರನ್ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.