ಮಂಗಳೂರು, ಸೆ14(SS): ರಾಜ್ಯಾದ್ಯಂತ ಸುದ್ದಿಯಾಗಿರುವ ಮೂಡುಬಿದಿರೆಯ ಪ್ರಸಿದ್ಧ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯ ಪೂಜಾರಿ ಅವರ ಆತ್ಮಹತ್ಯೆ ಕಳದೆ ಒಂದು ವರುಷದ ಹಿಂದೆ ನಡೆದಿದ್ದು, ಈ ಕರಾಳ ನೆನಪು ಮಾಸುವ ಮುನ್ನವೇ ಮತ್ತೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಬಗ್ಗೆ ದಾಯ್ಜಿವಾರ್ಲ್ಡ್ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಮೃತ ಕಾವ್ಯ ತಾಯಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು, ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ನನ್ನ ಮಗಳ ಸಾವಿಗೆ ವರುಷ ಒಂದು ಕಳೆದರೂ ನ್ಯಾಯ ಸಿಕ್ಕಿಲ್ಲ. ಮಗಳ ಸಾವಿನ ನೆನಪು ಮಾಸುವ ಮೊದಲೇ ಮತ್ತೊಂದು ಜೀವ ಆತ್ಮಹತ್ಯೆಗೆ ಶರಣಾಗಿದೆ. ಹಾಗಿದ್ದರೆ ಈ ಸಾವುಗಳಿಗೆ ನ್ಯಾಯ ಇಲ್ಲವೇ..? ಇನ್ನೆಷ್ಟು ಜೀವಗಳು ಬಲಿಯಾಗಬೇಕು ಎಂದು ಪ್ರಶ್ನಿಸಿದ್ದಾರೆ.
ಜಸ್ಟೀಸ್ ಫಾರ್ ಕಾವ್ಯಾ ಹೋರಾಟ ಸಮಿತಿ ನೇತ್ರತ್ವದಲ್ಲಿ ಈಡೀ ರಾಜ್ಯದಲ್ಲಿ ಹೋರಾಟ ಮಾಡಿದ್ದೆವು. ಮುಂದಿನ ದಿನಗಳಲ್ಲಿ ಯಾರ ಮಕ್ಕಳು ಈ ರೀತಿಯಾಗಿ ಬಲಿಯಾಗಬಾರದು ಎಂಬ ಉದ್ದೇಶದಿಂದ ನಾವು ಹೋರಾಟ ನಡೆಸಿದ್ದು. ಆದರೆ ಮತ್ತೆ ಮತ್ತೆ ಆಳ್ವಾಸ್ ಕಾಲೇಜಿನಲ್ಲಿ ಸರಣಿ ಆತ್ಮಹತ್ಯೆ ನಡೆಯುತ್ತಲೇ ಇದೆ. ನನ್ನ ಮಗಳನ್ನು ಕಳೆದುಕೊಂಡ ನೋವು ಇನ್ನೂ ಹಾಗೆ ಇದೆ. ನನಗೆ ನನ್ನ ಮಗಳು ಕಾವ್ಯ ಬೇರೆ ಅಲ್ಲ. ವಿನುತ ಬೇರೆ ಅಲ್ಲ. ನನ್ನ ಮಗಳಿಗೆ ನ್ಯಾಯ ಸಿಕ್ಕಿಲ್ಲ. ಕಾರಣ ಏನು ಎಂಬುದೇ ಗೊತ್ತಿಲ್ಲ. ಈ ಸಾವಿಗಾದರೂ ನ್ಯಾಯ ಸಿಗಲಿ ಎಂದು ಹೇಳಿದ್ದಾರೆ.
ಕಾಲೇಜಿನಲ್ಲಿ ಸರಣಿ ರೂಪದಲ್ಲಿ ವಿದ್ಯಾರ್ಥಿನಿಯರ ಸಾವು ಪ್ರಕರಣಗಳು ನಡೆಯುತ್ತಿದ್ದರೂ, ಆಡಳಿತ ಮಂಡಳಿ ಯಾವುದೇ ಸ್ಪಷ್ಟೀಕರಣ ನೀಡುತ್ತಿಲ್ಲ. ಜೊತೆಗೆ ಈವರೆಗೆ ಆದ ಸಾವಿನ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿಲ್ಲ. ನನ್ನ ಮಗಳ ಸಾವು ನಡೆದು ಒಂದು ವರುಷ ಕಳೆದರೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಯಾವುದೇ ಸಾಂತ್ವನಗಳನ್ನು ಹೇಳಿಲ್ಲ. ಒಂದು ಕರೆ ಮಾಡಿ ವಿಚಾರಿಸಿಯೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿನುತ ಸಾವು ಪ್ರಕರಣದ ಕುರಿತು ನ್ಯಾಯಯುತ ತನಿಖೆ ನಡೆಯಲಿ. ನನ್ನ ಮಗಳನ್ನು ಕಳೆದುಕೊಂಡ ನೋವು ನನಗೆ ಗೊತ್ತಿದೆ. ಈ ರೀತಿ ಮುಂದುವರಿಯುವುದು ಬೇಡ. ದಯವಿಟ್ಟು ಎಚ್ಚೆತ್ತುಕೊಳ್ಳಿ. ಯಾರೇ ತಪ್ಪಿ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ಮನವಿ ಮಾಡಿದರು.