ಮಂಗಳೂರು, ಸೆ14(SS): ಕಳೆದ ಕೆಲ ದಿನಗಳ ಹಿಂದೆ ಮೂಢನಂಬಿಕೆ ಪ್ರಶ್ನಿಸಿ ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿದ್ದ ಅಶ್ರಫ್ ಸಾಲೆತ್ತೂರು ಎಂಬ ಯುವಕನಿಗೆ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ವಿಚಾರಣೆ ನಡೆಸಿದ್ದು, ತಪ್ಪೆಸಗಿರುವುದು ಕಂಡುಬಂದರೆ ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಅವರಿಗೆ ಸೂಚನೆ ನೀಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸಚಿವರನ್ನು ಅಶ್ರಫ್ ಭೇಟಿ ಮಾಡಿದ್ದರು. ಮಾತ್ರವಲ್ಲ ಪೊಲೀಸರ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ಮನವಿಯನ್ನು ಕೂಡ ಸಲ್ಲಿಸಿದ್ದಾರೆ.
ಈ ವೇಳೆ ಅಲ್ಲಿಗೆ ಬಂದ ಪೊಲೀಸ್ ಕಮಿಷನರ್, ಸಚಿವರ ಎದುರಿನಲ್ಲೇ ಅಶ್ರಫ್ ಅವರಿಂದ ಪ್ರಕರಣದ ಕುರಿತು ವಿಸ್ತೃತ ಮಾಹಿತಿ ಪಡೆದುಕೊಂಡಿದ್ದಾರೆ.
ಸಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ ಆ್ಯಪ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್ಗಳಿಗೆ ಸಂಬಂಧಿಸಿದಂತೆ ಇದುವರೆಗೆ ದಾಖಲಿಸಿರುವ ಪ್ರಕರಣಗಳು, ತನಿಖೆಯ ವಿಧಾನದ ಕುರಿತು ವಿವರವಾದ ವರದಿ ಸಲ್ಲಿಸಲು ಸಚಿವರು ಸೂಚಿಸಿದ್ದು, ಇಂತಹ ಪ್ರಕರಣಗಳಲ್ಲಿ ಪೊಲೀಸರು ಪಕ್ಷಪಾತದ ನಿಲುವು ತಳೆಯದಂತೆ ಕಮಿನಷರ್ಗೆ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.
ಪತ್ರಕರ್ತರ ಜೊತೆ ಮಾತನಾಡಿದ ಖಾದರ್, ನನ್ನ ಎದುರಿನಲ್ಲೇ ಪೊಲೀಸ್ ಕಮಿಷನರ್ ಅವರು ಅಶ್ರಫ್ ಅವರಿಂದ ಎಲ್ಲ ಮಾಹಿತಿಯನ್ನು ಪಡೆದಿದ್ದಾರೆ. ಪ್ರಕರಣದ ಕುರಿತು ವಿಚಾರಣೆ ನಡೆಸುವಂತೆ ಸೂಚಿಸಿದ್ದೇನೆ. ಪೊಲೀಸರು ತಪ್ಪೆಸಗಿರುವುದು ಕಂಡುಬಂದರೆ ಕಮಿಷನರ್ ಕ್ರಮ ಜರುಗಿಸುತ್ತಾರೆ. ಯುವಕನಿಗೆ ನ್ಯಾಯ ದೊರಕಿಸುವುದಾಗಿ ಕಮಿಷನರ್ ಭರವಸೆ ನೀಡಿದ್ದಾರೆ ಎಂದು ಹೇಳಿದರು.