ಮಂಗಳೂರು, ಸೆ 13(SM): ನಾಡಿಗೆ ನಾಡೇ ಇದೀಗ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಮುಳುಗಿದೆ. ಕರಾವಳಿಯ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಡಗರದಿಂದ ಗಣೇಶೋತ್ಸವ ಆಚರಿಸಲಾಗಿದೆ. ಎಲ್ಲೆಡೆ ಗಣಪನ ವಿವಿಧ ಭಂಗಿಯ ವಿಗ್ರಹಗಳು ಭಕ್ತರನ್ನು ಕೈಬೀಸಿ ಕರೆಯುತ್ತಿದ್ದು, ಮನಸೂರೆಗೊಳಿಸುತ್ತಿವೆ. ಆದಿ ವಂದಿತನ ವಿಗ್ರಹಗಳಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಗುತ್ತಿದೆ. ಮನೆ, ದೇವಸ್ಥಾನ, ಸಂಘ ಸಂಸ್ಥೆಗಳಲ್ಲಿ ಗಣೇಶನ ವಿಗ್ರಹಗಳನ್ನಿಟ್ಟು ಪೂಜೆ ಸಲ್ಲಿಸಲಾಗುತ್ತಿದೆ.
ಕರಾವಳಿಯ ದೇವಸ್ಥಾನಗಳಲ್ಲಿ ಗಣೇಶ ಚತುರ್ಥಿ:
ಕರಾವಳಿಯ ವಿವಿಧ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಉತ್ಸವ ಕಂಡು ಬರುತ್ತಿದೆ. ನಗರದ ಬಹುತೇಕ ಕಡೆಗಳಲ್ಲಿ ಉತ್ಸವದ ಮೆರಗು ಕಂಡು ಬಂದಿದೆ. ಮಂಗಳೂರಿನ ಪ್ರಸಿದ್ಧ ವಿನಾಯಕ ಕ್ಷೇತ್ರ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಭಕ್ತ ಸಾಗರ ಕಂಡುಬಂತು. ಭಕ್ತರು ಗಣಪನ ದರ್ಶನಕ್ಕೆ ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂತು. ಅಲ್ಲದೆ ಭಕ್ತರು ವಿಘ್ನವಿನಾಶಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಮಹತೋಭಾರ ಶ್ರೀ ಮಂಗಳಾದೇವಿ ಕ್ಷೇತ್ರದಲ್ಲೂ ವಿಶೇಷ ಪೂಜೆ, ಮಹಾಗಣಪತಿಯ ಆರಾಧನೆ ನಡೆಯಿತು. ಇಲ್ಲೂ ಕೂಡಾ ಮುಂಜಾನೆಯಿಂದ ಭಕ್ತರು ಆಗಮಿಸಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಗಣೇಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರ ವಿಶೇಷ ಅಲಂಕಾರದಿಂದ ಕಂಗೊಳಿಸಿತು.
ಇನ್ನು ಬೆಳ್ತಂಗಡಿ ತಾಲೂಕಿನ ಸೌತಡ್ಕ ಶ್ರೀ ಮಹಾಗಣಪತಿ ಬಯಲು ದೇವಾಲಯದಲ್ಲಿ ಕೂಡ ಇಂದು ಭಕ್ತ ಸಾಗರ ಕಂಡು ಬಂತು. ಮುಂಜಾನೆಯಿಂದಲೇ ಭಕ್ತರು ಗಣಪತಿ ಸ್ತೋತ್ರಗಳ ಮೂಲಕ ಗಣಪನ ಆರಾಧನೆ ನಡೆಸಿದರು.
ಗಲ್ಲಿ ಗಲ್ಲಿಗಳಲ್ಲಿ ಗಣಪತಿಯ ಮಣ್ಣಿನ ಮೂರ್ತಿ ಯನ್ನಿಟ್ಟು ಪೂಜೆ ಮಾಡುವುದು ಗಣೇಶನ ಹಬ್ಬದ ಸಂದರ್ಭದಲ್ಲಿ ಸೌತಡ್ಕ ದೇವಾಲಯದ ವಿಶೇಷತೆ. ಇನ್ನು ಸೌತಡ್ಕ ಆಲಯದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಗಣಪತಿಗೆ ವರ್ಷವಿಡೀ ಪೂಜೆ ಸಲ್ಲಿಸುವುದು ಇಲ್ಲಿನ ಮತ್ತೊಂದು ವೈಶಿಷ್ಟ್ಯ. ಇನ್ನು ಈ ಕ್ಷೇತ್ರಕ್ಕಾಗಮಿಸಿ ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ ಎಂಬುವುದು ಭಕ್ತರ ನಂಬಿಕೆಯಾಗಿದ್ದು, ಇಂದಿಗೂ ಕೂಡ ಪಾಲಿಸಿಕೊಂಡು ಬರುತ್ತಿದ್ದಾರೆ. ಇನ್ನು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ 108 ಕಾಯಿಯ ಗಣಹೋಮ ಹಾಗೂ ರಂಗಪೂಜೆ, ವಿಶೇಷ ಪೂಜೆ ನಡೆಯಿತು.
ಇನ್ನು ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ವಿವಿಧ ಸಂಘಟನೆಗಳಿಂದ ಗಣಪತಿ ಆರಾಧನೆ ನಡೆಯುತ್ತಿದೆ. ಬಂಟ್ವಾಳ ತಾಲೂಕಿನ ಪೆರಾಜೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಶ್ರೀ ದೇವಿ ಟ್ರಸ್ಟ್ ವತಿಯಿಂದ 9 ನೇ ವರ್ಷದ ಗಣೇಶೋತ್ಸವ ನಡೆಯುತ್ತಿದೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಸಂಘ ನೇರಳಕಟ್ಟೆ ಇವರ ವತಿಯಿಂದ 23ನೇ ವರ್ಷದ ಹಾಗೂ ಕಲ್ಲಡ್ಕ ಗೋಳ್ತಮಜಲು ಶ್ರೀ ಗಣೇಶ ಮಂದಿರ, ಶ್ರೀ ಗಣೇಶೋತ್ಸವ ಸಮಿತಿ ಇವರ 27 ವರ್ಷದ ಗಣೇಶೋತ್ಸವ ನಡೆಯುತ್ತಿದೆ.
ಇನ್ನು ಉಡುಪಿಯಲ್ಲೂ ಗಣೇಶೋತ್ಸವದ ಸಂಭ್ರಮ ಜೋರಾಗಿದೆ. ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಕೃಷ್ಣ ನಗರಿ ವಿಘ್ನ ವಿನಾಯಕನ ಸ್ತುತಿಯಲ್ಲಿ ನಿರತವಾಗಿದೆ. ಎಲ್ಲೆಲ್ಲೂ ಹಬ್ಬದ ಅಲಂಕಾರ ಕಂಡು ಬರುತ್ತಿದೆ.
ಕಾಸರಗೋಡಿನಲ್ಲಿ ಗಣೇಶೋತ್ಸವ
ಕಾಸರಗೋಡು ಜಿಲ್ಲೆಯಲ್ಲೂ ಗಣೇಶ ಚತುರ್ಥಿ ಹಬ್ಬವನ್ನು ವಿವಿಧ ಧಾರ್ಮಿಕ, ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಮುಂಜಾನೆಯಿಂದ ಭಕ್ತಾಧಿಗಳು ದೇವಸ್ಥಾನೆಕ್ಕೆ ತೆರಳು ದೇವರ ದರ್ಶನ ಪಡೆದರು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಂದಿನಿಂದ ಸೆಪ್ಟೆಂಬರ್ 17ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರಂಗ ಅಂಗವಾಗಿ ಬೆಳಿಗ್ಗೆ ಶ್ರೀ ಗಣೇಶ್ ವಿಗ್ರಹವನ್ನು ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಮೆರವಣಿಗೆ ಮೂಲಕ ತಂದು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪ್ರಾಂಗಣದಲ್ಲಿ ಪ್ರತಿಷ್ಠೆ ಮಾಡಲಾಯಿತು. ಸೆಪ್ಟೆಂಬರ್ 17 ರಂದು ಸಂಜೆ ಮಹಾಗಣಪತಿಯ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಲಿದೆ.