ಕಾಸರಗೋಡು, ಎ.06 (DaijiworldNews/PY): ಕೇರಳ ಎಸ್ಸೆಸ್ಸೆಲ್ಸಿ ಹಾಗೂ ಪ್ಲಸ್ ಟು ಪರೀಕ್ಷೆಗಳು ಎಪ್ರಿಲ್ 8ರಿಂದ ಆರಂಭಗೊಳ್ಳಲಿದ್ದು, ಜಿಲ್ಲೆಯ 152 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, 19,354 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಸಾಂದರ್ಭಿಕ ಚಿತ್ರ
ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 10,631, ಕಾಞಂಗಾಡ್ ಶೈಕ್ಷಣಿಕ ಜಿಲ್ಲೆಯಲ್ಲಿ 8,723 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಎಪ್ರಿಲ್ 8ರ ಗುರುವಾರ ಆರಂಭಗೊಳ್ಳಲಿರುವ ಪರೀಕ್ಷೆಗಳು ಎಪ್ರಿಲ್ 29 ರಂದು ಕೊನೆಗೊಳ್ಳಲಿದೆ.
96 ಕೇಂದ್ರಗಳಲ್ಲಿ ಪ್ಲಸ್ ಟು ಪರೀಕ್ಷೆ ನಡೆಯಲಿದ್ದು, 15, 423 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 22 ಕೇಂದ್ರಗಳಲ್ಲಿ ವಿ.ಎಚ್.ಎಸ್.ಇ ಪರೀಕ್ಷೆ ನಡೆಯಲಿದ್ದು, 1,222 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
"ಕೊರೊನಾ ಮಾನದಂಡದಂತೆ ಪರೀಕ್ಷೆ ನಡೆಯಲಿದ್ದು , ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ .
ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ. ಕೊರೊನಾ ಸೋಂಕಿತ ವಿದ್ಯಾರ್ಥಿಗಳಿದ್ದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗುವುದು.