ಕಾಸರಗೋಡು, ಎ.06 (DaijiworldNews/PY): ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.74.91ರಷ್ಟು ಮತದಾನವಾಗಿದ್ದು, ಮತದಾನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕುತೂಹಲ ಕೆರಳಿಸಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತದಾನವಾಗಿದೆ. ಶೇ.76.81ರಷ್ಟು ಮತದಾನವಾಗಿದ್ದು, ಇದು ಈವರೆಗೆ ಗರಿಷ್ಟ ಮತದಾನವಾಗಿದೆ.
ಸಾಂದರ್ಭಿಕ ಚಿತ್ರ
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಇಳಿಕೆಯಾಗಿದೆ. 2016 ಕ್ಕಿಂತ ಶೇ 6ರಷ್ಟು ಮತದಾನ ಇಳಿಕೆಯಾಗಿದೆ. ಈ ಬಾರಿ ಶೇ. 70. 87ರಷ್ಟು ಮತದಾನವಾಗಿದ್ದು, ಯುಡಿಎಫ್ ಮತ್ತು ಬಿಜೆಪಿ ನೇರವಾಗಿ ಸೆಣಸುವ ಈ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಇಳಿಕೆಯಾಗಿರುವುದು ಎರಡೂ ಪಕ್ಷಗಳಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಉದುಮದಲ್ಲಿ ಶೇ.75. 56, ಕಾಞಂಗಾಡ್ ಶೇ. 74.03ರಷ್ಟು ಮತದಾನವಾಗಿದ್ದು, 2016ಕ್ಕಿಂತ ಎರಡರಿಂದ ಮೂರು ಶೇಕಡಾದಷ್ಟು ಇಳಿಕೆಯಾಗಿದೆ.
ಕಳೆದ ಬಾರಿ ಶೇ. 80ಕ್ಕಿಂತ ಅಧಿಕ ಮತದಾನವಾಗಿದ್ದ ತೃಕ್ಕರಿಪುರ ಕ್ಷೇತ್ರದಲ್ಲಿ ಈ ಬಾರಿ ಶೇ. 76. 77ರಷ್ಟು ಮಾತ್ರ ಮಾದಾನವಾಗಿದೆ.
ಜಿಲ್ಲೆಯಲ್ಲಿನ 10,58,337 ಮತಗಳ ಪೈಕಿ 7,92,872 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 3,77,371 ಪುರುಷರು, 4,15,499 ಮಂದಿ ಮಹಿಳೆಯರು ಮತ ಚಲಾಯಿಸಿದ್ದಾರೆ. ಮತ ಚಲಾವಣೆಯಲ್ಲಿ ಮಹಿಳೆಯರೇ ಮುಂದಿದ್ದಾರೆ.
ಮಂಜೇಶ್ವರದಲ್ಲಿ 2,21,682 ಮತಗಳ ಪೈಕಿ 1,79,289 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಾಸರಗೋಡಿನಲ್ಲಿ 2,01,812 ಮತದಾರರಲ್ಲಿ 1,43,041, ಉದುಮ 2,14,209 ಮಂದಿಯಲ್ಲಿ 1,61,859, ಕಾಞಂಗಾಡ್ 2,18,385 ಮಂದಿಯಲ್ಲಿ 1,62,398, ತೃಕ್ಕರಿಪುರದಲ್ಲಿ 2,02,249 ಮಂದಿಯಲ್ಲಿ 1,55,285 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಯುಡಿಎಫ್, ಬಿಜೆಪಿ, ಎಲ್ಡಿಎಫ್ ನಡುವೆ ತ್ರಿಕೋನ ಸ್ಪರ್ಧ ಯ ಮೂಲಕ ಗಮನಸೆಳೆದಿರುವ ಮಂಜೇಶ್ವರದಲ್ಲಿ ಮತಗಳ ಪ್ರಮಾಣದಲ್ಲಿ ಏರಿಕೆಯಾಗಿರುವುದು ಮೂರು ಪಕ್ಷಗಳಲ್ಲಿ ಗೆಲುವಿನ ಲೆಕ್ಕೆಚಾರ ಶುರುವಾಗಿದೆ.
ಯುಡಿಎಫ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಗೆ ವೇದಿಕೆಯಾಗಿರುವ ಮಂಜೇಶ್ವರದಲ್ಲಿ ಎಲ್ಡಿಎಫ್ ಪಡೆಯುವ ಮತಗಳು ಈ ಎರಡೂ ಪಕ್ಷಗಳ ಸೋಲು ಗೆಲುವನ್ನು ನಿರ್ಣಯಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 2016ರಲ್ಲಿ ಬಿಜೆಪಿ ಕೇವಲ 89 ಮತಗಳ ಅಂತರದಿಂದ ಸೋಲುಕಂಡಿತ್ತು. ಇದರಿಂದ ಈ ಚುನಾವಣೆ ಮೂರು ಪಕ್ಷಗಳಿಗೆ ನಿರ್ಣಾಯಕವಾಗಿದೆ.