ಸುಳ್ಯ, ಸೆ 13(SM): ಪಂಜ ಸಮೀಪದ ಪಂಬೆತ್ತಾಡಿಯಲ್ಲಿ ಸುಬ್ರಹ್ಮಣ್ಯ ಭಟ್ ಎಂಬವರ ಮೃತದೇಹ ಅವರ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಸೆಪ್ಟೆಂಬರ್ 7ರಂದು ಪತ್ತೆಯಾಗಿತ್ತು. ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪೋಲಿಸರು ಪ್ರಕರಣವನ್ನು ಭೇಧಿಸಿದ್ದು, ಆರೋಪಿಯನ್ನು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಸೆ.12ರಂದು ಹಾಜರು ಪಡಿಸಿದ್ದಾರೆ. ಕೊಡಿಯಾಲ ಗ್ರಾಮದ ಕಲ್ಪಡ ನಿವಾಸಿ ಆಶಿಕ್ ಬಂಧಿತ ಆರೋಪಿಯಾಗಿದ್ದಾನೆ.
ಪ್ರಕರಣದ ಬಗ್ಗೆ ತನಿಖೆ ನಡೆಸಿರುವ ಸುಳ್ಯ ವೃತ್ತ ನಿರೀಕ್ಷಕ ಸತೀಶ್ಕುಮಾರ್ ನೇತೃತ್ವದ ಪೊಲೀಸರ ತಂಡ ಅಂಗಳದಲ್ಲಿ ಹಾಸಿದ್ದ ಟರ್ಪಾಲಿನ ಮೇಲೆ ಪಿಕಪ್ ಹೋಗಿರುವ ಗುರುತನ್ನು ಆಧರಿಸಿ ತನಿಖೆ ಕೈಗೊಂಡಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿಕ್ ನನ್ನು ಪೊಲೀಸರು ಬಂಧಿಸಿದ್ದು ಆತ ತಪ್ಪೊಪ್ಪಿ ಕೊಂಡಿದ್ದಾನೆಂದು ತಿಳಿದುಬಂದಿದೆ.
ಆರೋಪಿ ಆಶಿಕ್ ಘಟನೆ ಬೆಳಕಿಗೆ ಬರುವ ಎರಡು ದಿನಗಳ ಮೊದಲು ಸುಬ್ರಹ್ಮಣ್ಯ ಭಟ್ರನ್ನು ಹೊಡೆದು ಕೊಂದಿದ್ದ. ಬಳಿಕ ಭಟ್ ತನ್ನೊಡನೆ ಅಡಿಕೆ ಮಾರಲು ಹೇಳಿದ್ದಾರೆಂದು ನಂಬಿಸಿ ಪರಿಚಿತರಾದ ವಸಂತ, ದೀಕ್ಷಿತ್, ಲಕ್ಷ್ಮೀಶ, ಪಿಕಪ್ ಮಾಲಕ ವಿದ್ಯಾನಂದರನ್ನು ಭಟ್ಟರ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಗೆ ಹೋದ ಬಳಿಕ ಫೋನ್ನಲ್ಲಿ ಭಟ್ಟರೊಡನೆ ಸಂಭಾಷಣೆ ಮಾಡುವಂತೆ ನಟಿಸಿ ಮನೆಯ ಬಾಗಿಲು ತೆರೆದು ಅಡಿಕೆ ತುಂಬಿಸಿ ಕಾಣಿಯೂರಿನ ವ್ಯಾಪಾರಿಯೋರ್ವರಿಗೆ ಮಾರಿದ್ದಾನೆಂದು ಎಂದು ತನಿಖಾ ವೇಳೆಯಲ್ಲಿ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ಪ್ರಕರಣದಲ್ಲಿ ಭಾಗಿಯಾದ ವಸಂತ, ದೀಕ್ಷಿತ್, ಲಕ್ಷೀಶ ಹಾಗೂ ವಿದ್ಯಾನಂದರನ್ನು ಪೋಲಿಸರು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ.