ವರದಿ: ಚಂದ್ರಶೇಖರ ಅರಿಬೈಲು
ಮಂಗಳೂರು, ಸೆ 13(SM): ಭಾದ್ರಪದ ಶುಕ್ಲ ಮಾಸದ ಚೌತಿ ಉತ್ಸವವಿಂದು. ಗಣೇಶನ ಹಬ್ಬ ಕೇವಲ ಹಿಂದೂಗಳಿಷ್ಟೇ ಅಲ್ಲ, ಸರ್ವಧರ್ಮದವರಿಗೂ ಪ್ರಿಯನಾದವ ಗಣೇಶ. ಏಕದಂತ, ವಕ್ರತುಂಡ, ಲಂಬೋದರ, ಸಿದ್ಧಿವಿನಾಯಕ, ವಿಘ್ನನಿವಾರಕ, ಗೌರೀತನಯ, ಗಣಪತಿ, ಮೂಷಿಕವಾಹನ, ಮೋದಕಪ್ರಿಯ ಹೀಗೆ ನಾನಾ ಹೆಸರುಗಳಲ್ಲಿ ಕರೆಯಲ್ಪಡುವ ಗಣೇಶೋತ್ಸವವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಕ್ತಿ ಭಾವದಿಂದ ಆಚರಿಸುತ್ತಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಅಂದು ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಜನತೆಯನ್ನು ಒಟ್ಟುಸೇರಿಸುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಈ ಉತ್ಸವ ಇಂದು ಜನತೆಯನ್ನು ಒಟ್ಟುಗೂಡಿಸುವ ಜೊತೆಗೆ ಧಾರ್ಮಿಕ ಸಾಮರಸ್ಯವನ್ನೂ ಮೂಡಿಸುವಲ್ಲಿ ನೆರವಾಗಿದೆ. ಪುಟ್ಟಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ, ಗಣೇಶನನ್ನು ವಿವಿಧ ಸ್ತುತಿಗಳಿಂದ ಪೂಜಿಸುವ ಒಂದು ಪರಿಕಲ್ಪನೆ ನಿಜಕ್ಕೂ ಒಂದು ಅದ್ಭುತವಾದುದು.
ಸಾರ್ವಜನಿಕವಾಗಿ ಪೂಜಿಸಲ್ಪಡುತ್ತಿದ್ದ ಗಣೇಶ ಇಂದು ಪ್ರತಿಯೊಬ್ಬರ ಮನೆಗಳಲ್ಲೂ ಪೂಜಿಸಲ್ಪಡುತ್ತಿದ್ದಾನೆ. ಮನಗಳಲ್ಲೂ ನೆಲೆನಿಂತಿದ್ದಾನೆ. ಯುವಜನತೆ ಇಂದು ಗಣೇಶನ ಉತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಿರುವುದನ್ನು ಕಂಡಾಗ ದೇಶಾದ್ಯಂತ ಗಣೇಶ ಮೂಡಿಸಿದ ಏಕತೆಯನ್ನು ಬಣ್ಣಿಸಲು ಸಾಧ್ಯವಿಲ್ಲ. ಗಣೇಶ ಉತ್ಸವದೊಂದಿಗೆ ಅದಕ್ಕೆ ಪೂರಕವಾಗಿರುವ ವಿಷಯಗಳೂ ಅಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅತ್ತ ತರಕಾರಿ ವ್ಯಾಪಾರಸ್ಥರು, ಹೂವಿನ ವ್ಯಾಪಾರ, ಪೆಂಡಾಲು, ಆರ್ಕೆಸ್ಟ್ರಾದವರೂ ಆರ್ಥಿಕವಾಗಿ ಸಬಲರಾಗುತ್ತಾರೆ. ಆದರೆ ಕೆಲವೊಮ್ಮೆ ದೇವರ ಮೇಲಿನ ಶ್ರದ್ಧೆ, ನಂಬಿಕೆಗಿಂತಲೂ ಆಡಂಬರವೇ ವಿಜೃಂಭಿಸುತ್ತಿರುವುದು ವಿಷಾದಕರ. ಗಣೇಶೋತ್ಸವದ ಉದ್ದೇಶವೇ ಬದಲಾಗುತ್ತಿರುವುದು ವಿಪರ್ಯಾಸಕರ.
ಮುಂಬೈನಲ್ಲಿ ಲಕ್ಷಾಂತರ ಮಂದಿ ಒಟ್ಟು ಸೇರಿ ಗಣೇಶೋತ್ಸವ ಆಚರಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ತಿಲಕರ ಮೂಲ ಆಶಯಕ್ಕೆ ಪೆಟ್ಟು ಬಿದ್ದು, ಉತ್ಸವದ ಸಂದರ್ಭದಲ್ಲಿ ಯಾವುದೋ ಅಹಿತಕರ ಘಟನೆಗಳು ನಡೆಯುತ್ತಿರುವುದು, ಸಮಾಜಘಾತುಕರಿಗೆ ತಮ್ಮ ದುಷ್ಕೃತ್ಯ ಈಡೇರಿಸಲು ಪೂರಕವೂ ಆಗುತ್ತಿರುವುದು ವಿಷಾದಕರ. ಶಿವಾಜಿ ಉತ್ಸವ ಮತ್ತು ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿ ಯುವಕರನ್ನು ಒಟ್ಟುಸೇರಿಸಿದ ತಿಲಕರು ಈ ಮೂಲಕ ಸ್ವಾತಂತ್ರ್ಯದ ಹೋರಾಟದ ಉದ್ದೇಶ, ಅಗತ್ಯವನ್ನು ವಿವರಿಸಿದ್ದರು. ಜನಾಂದೋಲನ ರೂಪಿಸಿದರು. ಆರೋಗ್ಯಕರ ಸಮಾಜ ನಿರ್ಮಾಣ ಮಾಡಿದರು.
ಆದರೆ ಇಂದಿನ ಗಣೇಶೋತ್ಸವ ಕೇವಲ ವರ್ಷಕ್ಕೊಮ್ಮೆ ನಡೆಸುವ ಮನೋರಂಜನೆಯಂತೆ ಕಂಡು ಬರುತ್ತಿದೆ. ಕಟ್ಟಾ ಸಂಪ್ರದಾಯಬದ್ಧವಾಗಿ ಆಚರಿಸಲ್ಪಡುತ್ತಿರುವ ಗಣೇಶ ಉತ್ಸವಗಳು ಇಂದಿಗೂ ಹಲವು ಕಡೆಗಳಲ್ಲಿ ಇದೆ. ಆದರೆ ಇನ್ನು ಕೆಲವು ಕಡೆಗಳಲ್ಲಿ ಮಾತ್ರ ಯಾವುದೇ ಅರ್ಥವಿಲ್ಲದ ಗಣೇಶೋತ್ಸವಗಳನ್ನು ಕಂಡಾಗ ನೋವುಂಟಾಗುತ್ತಿದೆ.
ಮುಖ್ಯವಾಗಿ ತಿಲಕರ ವಿಚಾರಧಾರೆಗಳನ್ನು, ಚಿಂತನೆಗಳನ್ನು ಮುಂದಿಟ್ಟುಕೊಂಡು ಆಚರಿಸುವ ಉತ್ಸವ ನಮ್ಮದಾಗಬೇಕು. ಅವರ ಮನಸ್ಸಿನ ಆಳ, ಆಶಯದ ಅರಿವು ಹೊಂದಿ ಮಾಡುವ ಉತ್ಸವಗಳು ಸಮಾಜದಲ್ಲಿ ಇನ್ನಷ್ಟು ಬಲ, ಒಗ್ಗಟ್ಟನ್ನು ತುಂಬಬಲ್ಲವು. ಅದಕ್ಕೋಸ್ಕರ ಗಣೇಶೋತ್ಸವಗಳು ಆಡಂಬರಕ್ಕೆ ಸೀಮಿತವಾಗದೇ ಗಣೇಶನ ಒಂದಿಷ್ಟು ವಿಚಾರಧಾರೆಗಳನ್ನು ನಮ್ಮ ನಿತ್ಯ ಬದುಕಿನಲ್ಲಿ ಅನುಷ್ಠಾನ ಮಾಡುವ ಮೂಲಕ ಮುಂದುವರಿಯೋಣ...
ಎಲ್ಲರಿಗೂ ಗೌರೀ ಗಣೇಶ ಹಬ್ಬ ಸನ್ಮಂಗಳವನ್ನುಂಟು ಮಾಡಲಿ...