ಉಡುಪಿ, ಸೆ 12(SM): ಬೈಕ್ ಹಾಗೂ ಕಂಟೈನರ್ ನಡುವೆ ಉಂಟಾದ ಭೀಕರ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿಯ ಸಂತಕಟ್ಟೆಯಲ್ಲಿ ನಡೆದಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ನವಮಿ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಂಟೈನರ್ ಚಾಲಕನ ಅತೀ ವೇಗದ ಚಲಾವಣೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇನ್ನು ಅಪಘಾತದ ತೀವ್ರತೆಗೆ ಕಂಟೈನರ್ ನಡಿಯಲ್ಲಿ ಬೈಕ್ ಹಾಗೂ ಸವಾರ ಸಿಕ್ಕಿ ಹಾಕಿಕೊಂಡಿದ್ದಾರೆ. ಬೈಕ್ ಸವಾರನ ಮೃತದೇಹ ಸಂಪೂರ್ಣ ಛಿದ್ರಗೊಂಡಿದೆ. ಕಂಟೈನರ್ ಚಕ್ರದಡಿ ಸಿಲುಕಿದ ಬೈಕ್ ಸವಾರನನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನೆಗೆ ಕ್ರೇನ್ ಮೂಲಕ ಕಂಟೈನರ್ ಮೇಲಕ್ಕೆತ್ತಿ ಶವವನ್ನು ಹೊರತೆಗೆಯಲಾಯಿತು. ಸಂತೆಕಟ್ಟೆ ಜಂಕ್ಷನ್ ನಲ್ಲಿ ಅಪಘಾತಗಳು ಹೆಚ್ಚಾಗಿ ನಡೆಯುತಿದ್ದು ವಾಹನ ಚಾಲಕರು ಸರಿಯಾಗಿ ರಸ್ತೆಯ ನಿಯಮಗಳನ್ನು ಪಾಲಿಸದೇ ಇರುವುದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.