ಕಾಸರಗೋಡು, ಸೆ 12(SM): ಕೇರಳದಲ್ಲಿ ಉಂಟಾದ ನೆರೆ ಹಿನ್ನಲೆಯಲ್ಲಿ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆ ಧನ ಸಂಗ್ರಹ ಯಜ್ಞದ ಜಿಲ್ಲಾ ಮಟ್ಟದ ಪ್ರಚಾರ ಸೆಪ್ಟೆಂಬರ್ 12ರ ಬುಧವಾರದಂದು ನಡೆದಿದೆ. ಈ ಹಿನ್ನೆಲೆ ಮಂಜೇಶ್ವರದಿಂದ ಕಾಲಿಕಡವು ತನಕ ಸೈಕಲ್ ರ್ಯಾಲಿ ಆಯೋಜಿಸಲಾಗಿತ್ತು.
ಹೊಸಂಗಡಿಯಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಪಿ. ಕರುಣಾಕರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ. ಶ್ರೀನಿವಾಸ್ ರವರಿಗೆ ಪತಾಕೆ ಹಸ್ತಾಂತರಿಸುವ ಮೂಲಕ ಸೈಕಲ್ ರ್ಯಾಲಿಗೆ ಚಾಲನೆ ನೀಡಿದರು.
ಹೊಸಂಗಡಿಯಿಂದ ಉಪ್ಪಳ ತನಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ. ಶ್ರೀನಿವಾಸ್ ಸೈಕಲ್ ರ್ಯಾಲಿಗೆ ನೇತೃತ್ವ ನೀಡಿದರು. ಬಳಿಕ ಉಪ್ಪಳ , ಕುಂಬಳೆ , ಚೌಕಿ , ಕಾಸರಗೋಡು ಸೇರಿದಂತೆ ಹತ್ತಕ್ಕೂ ಅಧಿಕ ಸ್ಥಳಗಳಲ್ಲಿ ರ್ಯಾಲಿಗೆ ಸ್ವಾಗತ ನೀಡಲಾಯಿತು. ಸಂಜೆ ಕಾಲಿಕಡವಿನಲ್ಲಿ ರ್ಯಾಲಿ ಅಂತ್ಯಗೊಂಡಿತು. ಸೈಕಲ್ ರ್ಯಾಲಿಯಲ್ಲಿ ಉದಿನೂರು ಮತ್ತು ಕುಟ್ಟಮತ್ ಹಯರ್ ಸೆಕಂಡರಿ ಸರಕಾರಿ ಶಾಲೆಯ ೪೦ರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡು ದಿನಗಳಲ್ಲಿ ತಲಾ ಎರಡು ತಾಲೂಕುಗಳಂತೆ ಧನಸಹಾಯ ಸಂಗ್ರಹ ನಡೆಯಲಿದ್ದು, ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ನೇತೃತ್ವದಲ್ಲಿ ಜನರಿಂದ ದೇಣಿಗೆ ಸ್ವೀಕರಿಸಲಿದ್ದಾರೆ.
ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು, ಮಂಜೇಶ್ವರ ಶಾಸಕ ಪಿ. ಬಿ ಅಬ್ದುಲ್ ರಜಾಕ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.