ಮಂಡ್ಯ, ಸೆ 12(MSP): ತವರಿಗೆ ಬಾ ತಂಗಿ, ಗೌರಿ ಗಣೇಶ ಹಬ್ಬವನ್ನು ಆಚರಿಸೋಣ ಎಂದು ಬಾಗಿನ ಮೂಲಕ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಮಂಡ್ಯ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಆಹ್ವಾನ ನೀಡಿದ್ದಾರೆ.
ಕಳೆದೆರಡು ವರ್ಷಗಳಿಂದ ಮಂಡ್ಯ ಜಿಲ್ಲೆಯಿಂದ ನಾಪತ್ತೆಯಾಗಿರುವ ಮಾಜಿ ಸಂಸದೆ ಬಳಿಕ ಮಂಡ್ಯ ಕಡೆಗೆ ತಿರುಗಿ ನೋಡಿಲ್ಲ. ಹೀಗಾಗಿ ಮತ್ತೆ ತವರು ನೆಲವಾದ ಮಂಡ್ಯಕ್ಕೆ ಕೊನೇಪಕ್ಷ ಗೌರಿ ಗಣೇಶ ಹಬ್ಬಕ್ಕದರೂ ಬನ್ನಿ ಎಂದು ಬಿಜೆಪಿ ಕಾರ್ಯಕರ್ತರು ವಿನಂತಿಸಿಕೊಟ್ಟಿದ್ದಾರೆ. ಮಾತ್ರವಲ್ಲದೆ ತವರು ಮನೆಯಿಂದ ಪೋಸ್ಟ್ ಮೂಲಕ ಬಾಗಿನ ಕಳುಹಿಸುತ್ತೇವೆ, ಈ ಉಡುಗೊರೆಯನ್ನು ನೋಡಿದರೂ ಮಂಡ್ಯ ಜಿಲ್ಲೆಯ ನೆನಪಾಗಲಿ , ಇಲ್ಲಿಗೆ ಆಗಮಿಸಲಿ ಎಂದು ರಮ್ಯ ಅವರನ್ನು ಕೋರಿದ್ದಾರೆ.
ಈ ಬಾರಿ ನಡೆದ ವಿಧಾನ ಸಭೆ ಹಾಗೂ ನಗರಸಭೆ ಚುನಾವಣೆ ಸಂದರ್ಭ ಇತ್ತ ಕಡೆ ತಲೆ ಹಾಕಾದ ರಮ್ಯಾ, ಕಡೆ ಪಕ್ಷ ಮತ ಚಲಾಯಿಸಲು ಬರಬಹುದೆಂಬ ವಿಶ್ವಾಸದಲ್ಲಿ ಸ್ಥಳೀಯರಿದ್ದರು. ಆದರೆ ಅದೂ ಕೂಡಾ ಸುಳ್ಳಾಗಿದೆ. ಗೌರಿ-ಗಣೇಶ ಹಬ್ಬಕ್ಕಾದರೂ ತವರು ಕ್ಷೇತ್ರ ಮಂಡ್ಯಕ್ಕೆ ಆಗಮಿಸಿ, ಜನರ ಸಂಕಷ್ಟಗಳಿಗೆ ಸ್ಪಂದಿಸಲಿ ಎಂದು ಬಿಜೆಪಿ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಇನ್ನು ಮಂಡ್ಯದ ನೆನಪಾಗದಿದ್ರೆ, ಮುಂದಿನ ಲೋಕಾ ಚುನಾವಣೆಗೆ ಬಂದಾಗ ಘೇರಾವ್ ಹಾಕುವುದಾಗಿ ಎಚ್ಚರಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಕಳುಹಿಸಿದ ಬಾಗಿನದಲ್ಲಿ ಹೂವು, ಬಳೆ, ಅರಸಿನ ಕುಂಕುಮ ಹಾಗೂ ತೆಂಗಿನಕಾಯಿ ಸೇರಿದಂತೆ ಎಲ್ಲವನ್ನೂ ಅಂಚೆ ಮೂಲಕ ರಮ್ಯಾಗೆ ಕಳುಹಿಸಿಕೊಟ್ಟಿದ್ದಾರೆ.. ಗೌರಿ-ಗಣೇಶ ಹಬ್ಬದ ನೆಪಕ್ಕಾದರೂ ರಮ್ಯಾ ತವರು ಜಿಲ್ಲೆಗೆ ಆಗಮಿಸುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ.