ಬೆಳ್ತಂಗಡಿ, ಸೆ 11(SM): ಮೂಲತಃ ಜೆಡಿಎಸ್ ಕಾರ್ಯಕರ್ತರಾಗಿದ್ದು ಬಳಿಕ ಕಾಂಗ್ರೇಸ್ ಪಕ್ಷಕ್ಕೆ ಬಂದು ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿದ್ದ ಮುಗುಳಿ ನಾರಾಯಣ ರಾವ್ ಕಾಂಗ್ರೇಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ನಾರಾಯಣ ರಾವ್ ಸುಮಾರು ಎರಡು ದಶಕಗಳ ಕಾಲ ರಾಜಕೀಯದಲ್ಲಿದ್ದವರು ಮಾಜಿ ಶಾಸಕ ವಸಂತ ಬಂಗೇರ ಅವರ ಪರಮಾಪ್ತರಲ್ಲೊಬ್ಬರಾಗಿದ್ದರು. ಬಂಗೇರ ಕಾಂಗ್ರೇಸ್ಗೆ ಸೇರ್ಪಡೆಗೊಂಡ ಸಂದರ್ಭ ಅವರೊಂದಿಗೆ ಮುಗುಳಿಯವರು ಕೂಡ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರು. ನಂತರ ಸುಮಾರು ಹತ್ತು ವರ್ಷಗಳ ಕಾಲ ಬೆಳ್ತಂಗಡಿ ಪಟ್ಟಣ ಪಂಚಾಯತ್ನ ಸದಸ್ಯರಾಗಿದ್ದು ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ನಾರಾಯಣರಾವ್ ಅವರು ಕಾಂಗ್ರೇಸ್ ಪಕ್ಷದ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದರು.
ಆದರೆ ತಾಲೂಕಿನ ಹಿರಿಯ ನಾಯಕರ ನಡವಳಿಕೆ ಹಾಗೂ ಆರೋಪಗಳಿಂದ ನೊಂದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ತಾನು ವೈಯಕ್ತಿಕ ಕಾರಣಗಳಿಗಾಗಿ ಕಾಂಗ್ರೇಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ವಿಧಾನ ಸಭಾಚುನಾವಣಾ ಸಂದರ್ಭ ಪಕ್ಷದ ನಾಯಕರ ನಡವಳಿಕೆಯಿಂದ ನೊಂದಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನಿಂದ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಇದನ್ನು ಎಲ್ಲಿ ಬೇಕಾದರೂ ಹೇಳಲು ಸಿದ್ದ ಎಂದು ಅವರು ತಿಳಿಸಿದ್ದಾರೆ.