ಮಂಗಳೂರು, ಸೆ11(MSP): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ರಫೇಲ್ ಯುದ್ದ ವಿಮಾನ ಹಗರಣದ ಮೂಲಕ ದೇಶವನ್ನು ಲೂಟಿ ಮಾಡುತ್ತಿದೆ ಆರೋಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೆ.11 ರ ಮಂಗಳವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು. ಪ್ರತಿಭಟನೆಗೂ ಮೊದಲು ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿ ಬಂತು.
50 ಕ್ಕೂ ಹೆಚ್ಚು ಬೈಕ್ ಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯ ಸಂದರ್ಭ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ದ ಘೋಷಣೆ ಕೂಗುತ್ತಾ ಸಾಗಿದ ಬೈಕ್ ಸವಾರರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡು ಬಂತು.
ರ್ಯಾಲಿಯಲ್ಲಿ ಹೊರಟ ನೂರಾರು ಸವಾರರು ಹೆಲ್ಮೆಟ್ ಧರಿಸದೇ ಕಾನೂನು ಉಲ್ಲಂಘಿಸಿದರು. ಪ್ರತಿಭಟನೆಯ ನೆಪದಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ರ್ಯಾಲಿ ಹೊರಡುತ್ತಿದ್ದುದನ್ನು ಕಂಡು ಪೊಲೀಸರು ಮಾತ್ರ ಕೈ ಕಟ್ಟಿಕೊಂಡು ನೋಡುತ್ತಿದ್ದರು. ಕಣ್ಣ ಮುಂದೆಯೇ ಕಾನೂನು ಉಲ್ಲಂಘಿಸುತ್ತಿದ್ದರೂ ಸುಮ್ಮನಿದ್ದ ಪೊಲೀಸರ ಕಂಡು ಜನಸಾಮಾನ್ಯರಿಗೊಂದು ನಿಯಮ, ಪ್ರತಿಭಟನಕಾರರಿಗೊಂದು ನಿಯಮವೇ ಎಂದು ಸಾರ್ವಜನಿಕರು ಕುಹಕವಾಡಿದರು.