ನವದೆಹಲಿ, ಸೆ 10(SM): ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಲ್ಲಿ ಇತಿಹಾಸ ಬರೆಯುತ್ತಿದ್ದರೂ ಸಹ ಇಂಧನದ ಮೇಲೆ ವಿಧಿಸುತ್ತಿರುವ ತೆರಿಗೆಯನ್ನು ಕಡಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರಕಾರ ಸ್ಪಶ್ಟಪಡಿಸಿದೆ. ತೆರಿಗೆ ಕಡಿತ ವಿಚಾರವನ್ನು ಕೇಂದ್ರ ಸರಕಾರ ಸಾರಸಗಟಾಗಿ ತಳ್ಳಿ ಹಾಕಿದೆ.
ಇನ್ನು ಈಗಾಗಲೇ ರಾಜಸ್ಥಾನ ಹಾಗೂ ಆಂಧ್ರಪ್ರದೇಶ ರಾಜ್ಯಗಳು ಪೆಟ್ರೋಲ್, ಡೀಸೆಲ್ ಮೇಲೆ ರಾಜ್ಯ ವಿಧಿಸುತ್ತಿದ್ದ ತೆರಿಗೆಯಲ್ಲಿ ಕಡಿತಗೊಳಿಸಿವೆ. ಹಾಗಾಗಿ ಕೇಂದ್ರವೂ ಇದೇ ಕ್ರಮ ಅನುಸರಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಸುಳ್ಳಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರ ವಿಧಿಸುತ್ತಿರುವ ತೆರಿಗೆಗಳಲ್ಲಿ ಯಾವುದೇ ಕಡಿತ ಮಾಡಲಾಗುವುದಿಲ್ಲ ಎಂದು ಕೇಂದ್ರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರದ ಈ ನಿರ್ಧಾರದಿಂದ ಜನರಿಗೆ ಇನ್ನಷ್ಟು ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿಯನ್ನು ಸಹಿಸಬೇಕಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಸತತ ಕುಸಿತದಿಂದಾಗಿ ಪೆಟ್ರೋಲ್ ಬೆಲೆ ಏರುತ್ತಿದೆ.