ಉಡುಪಿ, ಸೆ 10(SM): ಭಾರತ್ ಬಂದ್ ವೇಳೆ ಉಡುಪಿಯಲ್ಲಿ ನಡೆದ ಘರ್ಷಣೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಖಂಡಿಸಿದ್ದಾರೆ. 'ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದರು. ಅಂಗಡಿಗಳಿಗೆ ತೆರಳಿ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಬಿಜೆಪಿಯ ಕಾರ್ಯಕರ್ತರು ನಮ್ಮ ಪ್ರತಿಭಟನೆಗೆ ಅಡ್ಡಿ ಪಡಿಸಿದ್ದಾರೆ. ಮಾತ್ರವಲ್ಲದೆ, ಮುಚ್ಚಿದ್ದ ಅಂಗಡಿಗಳನ್ನು ಒತ್ತಾಯಪೂರ್ವಕವಾಗಿ ತೆರೆಯಲು ಮುಂದಾಗಿದ್ದಾರೆ ಎಂದರು.
ಇನ್ನು ಪೋಲೀಸರು ಕೂಡ ಕಾಂಗ್ರೆಸ್ ಕಾರ್ಯಕರ್ತರಿಗೆ ಅನಾವಶ್ಯಕವಾಗಿ ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಆರೋಪಿಸಿದರು. ಇದರ ಕುರಿತಾಗಿ ಉಸ್ತುವಾರಿ ಮಂತ್ರಿ ಡಾ| ಜಯಮಾಲ ಹಾಗೂ ಗೃಹಮಂತ್ರಿಗಳಿಗೆ ಮಾಹಿತಿ ನೀಡಲಾಗುವುದು. ಎಸ್ಪಿ ಕಛೇರಿ ಎದುರು ಬಿಜೆಪಿಯವರು ಧರಣಿ ಮಾಡುವ ಅವಶ್ಯಕತೆ ಏನಿತ್ತು? ಎಂದು ಅವರು ಪ್ರಶ್ನಿಸಿದ್ದಾರೆ. ಭಾರತ್ ಬಂದ್ ಗೆ ಉಡುಪಿಯ ಜನತೆ ಉತ್ತಮ ಸ್ಪಂದನೆ ನೀಡಿದ್ದರು.
ಎಲ್ಲಿಯೂ ಬಲವಂತದ ಬಂದ್ ಮಾಡಲಾಗಿಲ್ಲ. ಈ ಹಿಂದೆಯೂ ಶಾಂತಿಯುತ ಪ್ರತಿಭಟನೆಗೆ ಬಿಜೆಪಿಯವರು ಅಡ್ಡಿಪಡಿಸಿದ್ದರು. ನಾವು ಯಾವತ್ತೂ ಅವರ ಪ್ರತಿಭಟನೆಗೆ ಅಡ್ಡಿ ಪಡೆಸಿಲ್ಲ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಖುದ್ದು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದು ಖಂಡನೀಯ. ಕಾಂಗ್ರೆಸ್ ನಗರಸಭೆಯ ಕೌನ್ಸಿಲರ್ ರಮೇಶ್ ಕಾಂಚನ್, ವಿಜಯ ಪೂಜಾರಿ ಹಾಗೂ ಕಾರ್ಯಕರ್ತ ಆರ್ ಕೆ ರಮೇಶ್ ಮೇಲೆ ಪೋಲಿಸ್ ದೌರ್ಜನ್ಯ ಮಾಡಿದ್ದು ಖಂಡನೀಯ. ಇಂತಹ ಪ್ರಕ್ಷುಬ್ದ ಸಮಯದಲ್ಲಿ ತಾಳ್ಮೆಯಿಂದ ಇರಬೇಕಾದ ಪೋಲಿಸರೇ ಸಂಯಮ ಕಳೆದು ಕೊಂಡರೆ ಹೇಗೆ ಎಂದು ಮಾಜಿ ಶಾಸಕರು ಪ್ರಶ್ನಿಸಿದರು. ಈ ರೀತಿಯ ಪೊಲೀಸ್ ನಡೆಯ ಬಗ್ಗೆ ತನಿಖೆ ಆಗಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಎಲ್ಲಾದರೂ ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಬಂದ್ ಮಾಡಿದ್ದಾದಲ್ಲಿ ಅದೂ ಕೂಡ ತನಿಖೆಯಾಗಲಿ ಎಂದವರು ಹೇಳಿದರು.