ಮಂಗಳೂರು, ಮಾ. 29 (DaijiworldNews/SM): ಮಂಗಳೂರು ಏರ್ ಪೋರ್ಟ್ ನಲ್ಲಿ 1 ತಿಂಗಳ ಮಗುವಿನ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಇದರ ವಿರುದ್ಧ ನಾಗರಿಕ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಅಬುದಾಬಿಯಿಂದ ದಂಪತಿ ಮತ್ತು 1 ತಿಂಗಳ ಮಗು ಮಂಗಳೂರಿಗೆ ಬಂದಿದ್ದರು. ಇಂದು ಮುಂಜಾನೆ 4.30ಕ್ಕೆ ಮಂಗಳೂರು ಏರ್ ಪೋರ್ಟ್ ಮೂಲಕ ಆಗಮಿಸಿದ್ದರು. ಈ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೊನಾ ಟೆಸ್ಟ್ ನಡೆಸಲಾಗಿದೆ. ದಂಪತಿಯೊಂದಿಗಿದ್ದ 1 ತಿಂಗಳ ಮಗುವನ್ನು ಕೂಡ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಗುವಿನ ಕೊರೊನಾ ಟೆಸ್ಟ್ ನಡೆಸಿದ್ದಕ್ಕೆ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನವೀಯತೆಯನ್ನೇ ಮರೆತರೇ?
1 ತಿಂಗಳ ಮಗುವಿಗೆ ಕೊರೊನಾ ಟೆಸ್ಟ್ ನಡೆಸಿರುವ ವಿಚಾರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 2 ವರ್ಷದ ಒಳಗಿನ ಮಕ್ಕಳ ಕೊರೊನಾ ಟೆಸ್ಟ್ ನಡೆಸುವಂತಿಲ್ಲ ಎನ್ನುವ ಉಲ್ಲೇಖಗಳಿದ್ದರೂ ಕೂಡ 1 ತಿಂಗಳ ಮಗುವನ್ನು ಒತ್ತಾಯಪೂರ್ವಕವಾಗಿ ಪರೀಕ್ಷೆಗೆ ಒಳಪಡಿಸಿರುವುದು, ಅಧಿಕಾರಿಗಳು ಮಾನವೀಯತೆಯನ್ನೇ ಮರೆತರೇ ಎನ್ನುವ ಪ್ರಶ್ನೆ ಕಾಡುವಂತಾಗಿದೆ. ಅಲ್ಲದೆ ಮಗುವಿನ ಆರೋಗ್ಯದಲ್ಲೂ ಕೂಡ ಏರುಪೇರಾಗಿದೆ ಎನ್ನಲಾಗಿದೆ.