ಬಂಟ್ವಾಳ, ಸೆ 10 (MSP): ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇದ್ದ ಕಾರಿನ ಮೇಲೆ ಕಿಡಿಗೇಡಿಗಳ ತಂಡವೊಂದು ಕಲ್ಲೆಸೆದ ಘಟನೆ ಬೋಳಂಗಡಿಯಲ್ಲಿ ನಡೆದಿದೆ. ಎಂಎಲ್ಎ ಬಂಟ್ವಾಳದಿಂದ ಕಲ್ಲಡ್ಕದ ಕಡೆ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಇವರಿದ್ದ ಕಾರು ಬೋಳಂಗಡಿ ತಲುಪುತ್ತಿದ್ದಂತೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಉಳಿಪಾಡಿಗುತ್ತು ಅವರಿದ್ದ ಕಾರಿನ ಎಡಭಾಗಕ್ಕೆ ಸ್ವಲ್ಪ ಹಾನಿಯಾಗಿದೆ.
ಕಲ್ಲೆಸೆತ ಬಗ್ಗೆ ಶಾಸಕ ರಾಜೇಶ್ ನಾಯ್ಕ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ಕಲ್ಲೆಸೆತದ ಸುದ್ದಿ ಹಬ್ಬುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ನಗರ ಠಾಣೆ ಮುಂದೆ ಜಮಾಯಿಸಿ ಕಲ್ಲುತೂರಾಟ ನಡೆಸಿದ ಕಿಡಿಗೇಡಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.