ಮಂಗಳೂರು, ಸೆ 10 (MSP): ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ನೀಡಲಾಗಿರುವ ಭಾರತ್ ಬಂದ್ ಕರೆಗೆ ಕರಾವಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವಿಭಜಿತ ದಕ್ಷಿಣ ಕನ್ನಡದಲ್ಲಿ ಬಂದ್ ನಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಖಾಸಗಿ ಮತ್ತು ಸರ್ಕಾರಿ ಬಸ್ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಮಂಗಳೂರು, ಉಡುಪಿ, ಕುಂದಾಪುರ, ಕಡಬ , ಬಂಟ್ವಾಳ ಮುಂತಾದೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ನಡುವೆ ಮಂಗಳೂರಿನ ಬಲ್ಮಠದಲ್ಲಿ ಬಸ್ ಹಾಗೂ ಹೋಟೆಲ್ ಗಳ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ಸೆ. 10 ರ ಸೋಮವಾರ ನಡೆದಿದೆ. ಹೆಲ್ಮೆಟ್ ಹಾಕಿದ್ದ ದುಷ್ಕರ್ಮಿಯೊಬ್ಬ ಬೈಕ್ ನಲ್ಲಿ ಬಂದು ಕದ್ರಿಯಲ್ಲಿರುವ ಶಿವಭಾಗ್ ಹೊಟೇಲ್ ಮೇಲೆ ಕಲ್ಲುತೂರಾಟ ನಡೆಸಿದ್ದು, ಪರಿಣಾಮ ಕಿಟಕಿ ಗಾಜು ಪುಡಿ ಪುಡಿಯಾಗಿದೆ. ಇನ್ನು ನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವಾಹನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದೆ.