ಮಂಗಳೂರು, ಸೆ 9(SM): ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನಾಳೆ ಭಾರತ್ ಬಂದ್ ಗೆ ಕಾಂಗ್ರೆಸ್ ಕರೆ ನೀಡಿದ್ದು, ಇದರ ವಿರುದ್ಧ ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕರೆ ನೀಡಿರುವ ಬಂದ್ ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವರ್ಷದ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯ್ ಮಂಗಳೂರಿಗೆ ಭೇಟಿ ನೀಡದಂತೆ ಬಿಜೆಪಿ ಬಂದ್ ಗೆ ಕರೆ ನೀಡಿತ್ತು. ಆ ಸಂದರ್ಭ ಪ್ರತಿಭಟನಾಕಾರರ ವಿರುದ್ಧ ಇಂದಿನ ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕರಿಗೆ ತೊಂದರೆ ನೀಡಿ ಬಂದ್ ಮಾಡುವವರ ವಿರುದ್ಧ ವಾಗ್ದಾಳಿ ನಡೆಸಿದರು. ಬಂದ್ ಮಾಡುವವರಿಗೆ ಚಪ್ಪಲಿಯಲ್ಲಿ ಹೊಡಿಯಬೇಕು ಎಂದು ಹೇಳಿದ್ದರು. ಈಗ ಅವರೇ ಬಂದ್ ಗೆ ಬೆಂಬಲ ನೀಡಿದ್ದಾರೆ ಹಾಗಿದ್ರೆ ಅವರಿಗೆ ಯಾವುದರಲ್ಲಿ ಹೊಡಿಬೇಕು ಎಂದು ವ್ಯಂಗ್ಯವಾಡಿದ್ದಾರೆ.