ಉಡುಪಿ, ಸೆ 9 (MSP): ಶಿರೂರು ಶ್ರೀಗಳ ನಿಗೂಢ ಸಾವಿಗೆ ಸಂಬಂಧಿಸಿದಂತೆ ಕೆಎಂಸಿ ವೈದ್ಯರ ತಂಡ ಅಂತಿಮ ವರದಿ ಸಲ್ಲಿಸಿದೆ. ಶ್ರೀಗಳದ್ದು ಸಹಜ ಸಾವು ಎಂದು ವೈದ್ಯರು ವರದಿ ನೀಡಿದ್ದಾರೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವಿಧಿ ವಿಜ್ಞಾನ ಪ್ರಯೋಗಲಾಯದ ತಜ್ಞ ವೈದ್ಯರ ಅಂತಿಮ ವರದಿ ಇದನ್ನು ಸ್ಪಷ್ಟಪಡಿಸಿದೆ. ಸಾವಿಗೆ ಸಂಬಂಧಿಸಿದಂತೆ ಎಫ್ಎಸ್ಎಲ್ ವರದಿಯನ್ನು ಪೊಲೀಸ್ ಇಲಾಖೆಗೆ ವೈದ್ಯರು ಹಸ್ತಾಂತರಿಸಿದ್ದಾರೆ. ಲಿವರ್ ವೈಫಲ್ಯ, ಅನ್ನನಾಳದಲ್ಲಿ ತೊಂದರೆ ಕಾಣಿಸಿಕೊಂಡು ರಕ್ತಸ್ರಾವದಿಂದ ಶ್ರೀಗಳು ಜುಲೈ 19ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಸ್ವಾಮೀಜಿಗಳ ದೇಹದಲ್ಲಿ ವಿಷ ಅಂಶ ಪತ್ತೆಯಾಗಿರುವ ಬಗ್ಗೆ ವೈದ್ಯರು ಹೇಳಿಕೆ ನೀಡಿದ್ದರು. ಇದರಿಂದಾಗಿ ಶ್ರೀಗಳದ್ದು ಅಸಹಜ ಸಾವು, ಈ ಬಗ್ಗೆ ತನಿಖೆ ನಡೆಸಬೇಕೆಂದು ಸ್ವಾಮೀಜಿಯ ಭಕ್ತರು ಒತ್ತಾಯಿಸಿದ್ದರು. ಶ್ರೀಗಳ ಸಾವಿಗೆ ಸಂಬಂಧಿಸಿದಂತೆ ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ಶ್ರೀಗಳದ್ದು ಸಹಜ ಸಾವು ಎಂದು ವರದಿ ನೀಡಿತ್ತು. ಈಗ ವೈದ್ಯರು ನೀಡಿದ ಅಂತಿಮ ವರದಿಯಲ್ಲೂ ವಿಷದ ಅಂಶ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.
ವೈದ್ಯರು ಶಿರೂರು ಶ್ರೀಗಳು ಅನ್ನನಾಳದ ರಕ್ತಸ್ರಾವ ಹಾಗೂ ಕೋನ್ನಿಕ್ ಲಿವರ್ ಸಿರಾಸಿಸ್ ನಿಂದ ಮೃತರಾಗಿದ್ದಾರೆ. ದೇಹದಲ್ಲಿ ಯಾವುದೇ ವಿಷ ಅಂಶ ಪತ್ತೆಯಾಗಿಲ್ಲ ಎಂದು ಅಂತಿಮ ಷರಾ ಬರೆದಿದ್ದಾರೆ, ಈ ವರದಿ ಜಿಲ್ಲಾ ಪೊಲೀಸರ ಕೈ ಸೇರಿದ್ದು, ಶುಕ್ರವಾರ ಪ್ರಕರಣದ ತನಿಖಾಧಿಕಾರಿ ಕಾರ್ಕಳ ಡಿವೈಎಸ್ಪಿ ಬೆಳಿಯಪ್ಪ ತನಿಖೆ ಪೂರ್ಣಗೊಳಿಸಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಭೂ ಬಾಲನ್ ಅವರಿಗೆ ಹಸ್ತಾಂತರಿಸಿದ್ದಾರೆ.