ಸುಳ್ಯ, ಸೆ 9 (MSP) : ಕಲ್ಲಗುಂಡಿಯ ಜೋಡುಪಾಲ ನಿರಾಶ್ರಿತ ಕೇಂದ್ರದಲ್ಲಿ ಮೆಹಂದಿ ಶಾಸ್ತ್ರ ನಡೆದು ನಂತರ ಮಡಿಕೇರಿಯಲ್ಲಿ ಮದುವೆಯಾಗಿ ಸುದ್ದಿಯಾಗಿದ್ದ ರುದ್ರೇಶ್ - ವಾರಿಜಾ ಪ್ರಕರಣ ಇದೀಗ ಠಾಣೆ ಮೆಟ್ಟಿಲೇರಿದೆ. ರುದ್ರೇಶ್ ನ ಮೊದಲ ಪತ್ನಿ ಎಂದು ಹೇಳಿಕೊಂಡಿರುವ ಗಂಗಾ ಎಂಬಾಕೆ ಇದೀಗಾ ಬಾಗಲಕೋಟೆಯ ಬನಹಟ್ಟಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಎರಡನೇ ವಿವಾಹವಾದ ಯುವತಿ ಮನೆಯವರು ಈತನ ವಂಚನೆ ಬಗ್ಗೆ ಯಾವುದೇ ದೂರು ದಾಖಲಿಸಿಲ್ಲ. ವಾರಿಜಾ ಅವರನ್ನು ರುದ್ರೇಶ್ ಎರಡನೇ ಮದುವೆ ಆಗಿದ್ದಾನೆ ಎಂಬ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ವಿವಾಹ ವಂಚನೆಯ ಆರೋಪಿ ರುದ್ರೇಶ್ ಮೂಲತಃ ಬಾಗಲಕೋಟೆಯವನು, ಆದರೆ ಈತ ಮಡಿಕೇರಿಯಲ್ಲಿ ವಿವಾಹದ ಸಂದರ್ಭ ಮಹಾರಾಷ್ಟ್ರದ ಪುಣೆ ಪಟ್ಟಣ ಎಂದು ಹೆಸರು ನೊಂದಾಯಿಸಿಕೊಂಡಿದ್ದಾನೆ ಎನ್ನಲಾಗಿದೆ. ಜೋಡುಪಾಲದಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಿರಾಶ್ರಿತರಾಗಿದ್ದ ವಾರಿಜಾ ಮತ್ತು ಅವರ ತಾಯಿ ಕಲ್ಲುಗುಂಡಿ ಪರಿಹಾರ ಕೇಂದ್ರಕ್ಕೆ ಬಂದು ಸೇರಿದ್ದರು. ಈ ಹಿಂದೆ ನಿಗದಿಯಾಗಿದ್ದ ಮದುವೆ ನಡೆಯದೆ ಇರುವ ವಿಷಯ ವಾರಿಜಾ ಅವರ ತಾಯಿ ಕೇಂದ್ರದ ಸಂತ್ರಸ್ತರ ಬಳಿ ಹೇಳಿದ್ದರೆನ್ನಲಾಗಿದೆ. ಇದರಿಂದ ಕಾರ್ಯಪ್ರವೃತ್ತರಾದ ಕೆಲವರು, ರುದ್ರೇಶ್ ಜತೆ ಮಾತುಕತೆ ನಡೆಸಿ, ಅನೇಕರ ಸಹಾಯದೊಂದಿಗೆ ದೇವಸ್ಥಾನದಲ್ಲಿ ವಿವಾಹ ನಡೆಸಿದ್ದಾರೆ. ಅಲ್ಲದೆ ಈ ವಿವಾಹಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಾಕ್ಷಿಯಾಗಿದ್ದಾರೆ.
ರುದ್ರೇಶ್ ಬಾಗಲಕೋಟೆ ನಿವಾಸಿಯಾಗಿದ್ದು, ಗಂಗಾ ಅವರನ್ನು ಈ ಮೊದಲೇ ವಿವಾಹವಾಗಿದ್ದಾನೆ ಎನ್ನಲಾಗಿದೆ. ರುದ್ರೇಶ್ ಊರು ಬಿಟ್ಟು ಹೋಗಿ ಪುಣೆಯಲ್ಲಿ ಕನ್ನಡಕದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.