ಉಡುಪಿ, ಸೆ08(SS): ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಕರಾವಳಿ ಭಾಗಕ್ಕೆ ಯಾವುದೇ ರೀತಿಯ ಮೋಸ ಮಾಡುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಡುಪಿ ಸೇರಿದಂತೆ ದಕ್ಷಿಣ ಕ್ನನಡ ಜಿಲ್ಲೆಯ ಜನರಿಗೆ ಮೈತ್ರಿ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ತಲುಪಿಸುತ್ತದೆ. ಈಗಾಗಲೇ ಕರಾವಳಿಯಲ್ಲಿ ಹೊಸ ಕೈಗಾರಿಕೆ ಸ್ಥಾಪನೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಪರಿಸರ ವಿರೋಧಿ ಕೈಗಾರಿಕೆಗಳನ್ನು ಜಿಲ್ಲೆಗೆ ತರುವುದಿಲ್ಲ. ಜಿಲ್ಲೆಯ ಎಲ್ಲಾ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಾಗಬೇಕು ಎಂದು ಹೇಳಿದ್ದಾರೆ.
ಮೀನುಗಾರಿಕೆ ಹಾಗೂ ಮೊಗವೀರರ ಬಗ್ಗೆಯೂ ಸುದೀರ್ಘ ಚರ್ಚೆಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಮಹಿಳಾ ವಸತಿನಿಲಯ ಸ್ಥಾಪನೆಗೆ ಬೇಡಿಕೆ ಬಂದಿದ್ದು, ಈ ವರ್ಷವೇ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಈ ವೇಳೆ ಕರಾವಳಿಯಲ್ಲಿ ಸುರಿದ ಮಳೆಯಿಂದಾದ ನಷ್ಟದ ಕುರಿತು ಮಾತನಾಡಿದ ಅವರು, ಕರಾವಳಿಯಲ್ಲಿ ಸುರಿದ ಭಾರೀ ಮಳೆಗೆ 141 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪ್ರಾಥಮಿಕ ವರದಿ ನೀಡಿದ್ದಾರೆ. ಈಗಾಗಲೇ ಸರ್ಕಾರದಿಂದ 14 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ನಾನು ರಾಜಧಾನಿಗೆ ತೆರಳಿದ ನಂತರ ಪುನಃ 100 ಕೋಟಿ ರೂಪಾಯಿಗೆ ಬಿಡುಗಡೆ ಮಾಡುತ್ತೇನೆ. ರಾಜ್ಯದ ಜನರ ನಿರೀಕ್ಷೆ ಹುಸಿಯಾಗದಂತೆ ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ಕರಾವಳಿಗರಿಗೆ ನಮ್ಮ ಸರಕಾರ ಯಾವತ್ತೂ ಮೋಸ ಮಾಡಲ್ಲ ಎಂದು ಹೇಳಿದ್ದಾರೆ.