ಮಂಗಳೂರು, ಸೆ 8(SM): ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಗೆಲ್ಲುವ ಮೂಲಕ ಪೂವಮ್ಮ ಜಿಲ್ಲೆ, ರಾಜ್ಯ ಮಾತ್ರವಲ್ಲದೆ ದೇಶಕ್ಕೆ ಹಿರಿಮೆಯನ್ನು ತಂದಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಸೆಪ್ಟೆಂಬರ್ 7ರ ಶುಕ್ರವಾರ ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ಪೂವಮ್ಮ ಅವರನ್ನು ಗೌರವಿಸಿದರು. ಬಳಿಕ ಸರಕಾರದ ವತಿಯಿಂದ ಚಿನ್ನ ಗೆದ್ದ ಪೂವಮ್ಮಗೆ 25 ಲಕ್ಷ ರೂಪಾಯಿಗಳ ಚೆಕ್ ಹಸ್ತಾಂತರಿಸಿದರು. ಇನ್ನು ಇದೇ ಸಂದರ್ಭ ಸರಕಾರದ ವತಿಯಿಂದ ಪೂವಮ್ಮಗೆ ಸೈಟ್ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು. ಇಂತಹ ಸನ್ಮಾನಗಳು ಇತರ ಸಾಧಕರಿಗೆ ಸ್ಫೂರ್ತಿಯಾಗಲಿದೆ ಎಂದ ಅವರು, ವಿಶೇಷ ಸಾಧಕರನ್ನು ಗುರುತಿಸಿ ಸರಕಾರದ ವತಿಯಿಂದ ಸನ್ಮಾನಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಕಮಿಷನರ್ ಟಿ.ಆರ್. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.