ಮಂಗಳೂರು, ಸೆ 8(SM): ದ.ಕ. ಜಿಲ್ಲೆಯಲ್ಲಿ ಇತ್ತಿಚಿಗೆ ಸುರಿದ ಭಾರೀ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದ್ದು, ಈ ಬಗ್ಗೆ ಅಧಿಕಾರಿಗಳ ಸಭೆಯನ್ನು ಕರೆದು ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಸಭೆಯಲ್ಲಿ ಭಾಗಿಯಾಗಿ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಯಿಂದಾಗಿ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಖಾದರ್ ಹಾಗೂ ಜಿಲ್ಲಾಧಿಕಾರಿಗಳು ಇತರ ಅಧಿಕಾರಿಗಳೊಂದಿಗೆ ಸೇರಿ ಉತ್ತಮ ರೀತಿಯಲ್ಲಿ ಜನರ ನೆರವಿಗೆ ಧಾವಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಅನಾಹುತಗಳು ನಡೆಯದಂತೆ ಕ್ರಮಕೈಗೊಂಡಿದ್ದಾರೆ. ಇನ್ನು ಜಿಲ್ಲೆಯಲ್ಲಿ ಸುಮಾರು ೨೧೩ ಕೋಟಿ ರೂಪಾಯಿಯಷ್ಟು ಆಸ್ತಿ ಪಾಸ್ತಿ, ಬೆಳೆ ಹಾನಿಯಾಗಿದ್ದು, ನಷ್ಟ ಪರಿಹಾರವನ್ನು ರಾಜ್ಯ ಸರಕಾರ ನೀಡಿದೆ ಎಂದರು.
ಇನ್ನು ಜಿಲ್ಲೆಯಲ್ಲಿ ಎಡೆಬಿಡದೆ ಸುರಿದಂತಹ ಮಳೆ ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದೆ. ಅಡಿಕೆಗೆ ಕೊಳೆರೋಗ ಹಳದಿ ರೋಗಗಳು ತಗುಲಿದೆ. ಈ ಬಗ್ಗೆ ಇಲ್ಲಿನ ಸಂಸದರು, ಶಾಸಕರು ಸರಕಾರದ ಗಮನ ಸೆಳೆದಿದ್ದು, ಸಮಸ್ಯೆಗೊಳಗಾದ ರೈತರಿಗೆ ಗರಿಷ್ಠ ಪರಿಹಾರ ನೀಡಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇನ್ನು ಎಂಡೋ ಸಂತ್ರಸ್ತರ ಬಗ್ಗೆ ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ, ಎಂಡೋ ಸಂತ್ರಸ್ತ ಕುಟುಂಬಗಳ ಸಮಗ್ರವಾದ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿಯ ಆಧಾರದಲ್ಲಿ ಪರಿಹಾರ ವಿತರಣೆ, ಇತರ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ಜಿಲ್ಲೆಯ ಸಮುದ್ರ ಕಿನಾರೆಯಲ್ಲಿ ಎದುರಾಗುತ್ತಿರುವ ಕಡಲ ಸವೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಮಾರ್ಗೋಪಾಯ ಕಂಡುಕೊಳ್ಳಲಾಗಿದ್ದು, ಶೀಘ್ರದಲ್ಲೇ ಅನುಷ್ಟಾನಗೊಳಿಸಲಾಗುವುದಾಗಿ ಅವರು ತಿಳಿಸಿದ್ದಾರೆ. ರಾಜ್ಯ ಸರಕಾರದ ಸಾಲ ಮನ್ನಾದ ಬಗ್ಗೆ ಪ್ರಸ್ತಾಪಿಸಿದ ಅವರು, ಬಿಜೆಪಿ ಸಾಲ ಮನ್ನಾದ ವಿಚಾರವಾಗಿ ಸ್ಪಷ್ಟ ನಿಲುವನ್ನು ಹೊಂದಿಲ್ಲ. ರೈತರಿಗೆ ನೆರವಾಗಲು ಕೇಂದ್ರ ಸರಕಾರ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ, ಮನಪಾ ಮೇಯರ್ ಭಾಸ್ಕರ್ ಮೊಯ್ಲಿ, ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಮತ್ತಿತರರು ಉಪಸ್ಥಿತರಿದ್ದರು.