ಮಂಗಳೂರು, ಸೆ 7(SM): ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಟ್ಟಿ ಹೊಳೆಯಲ್ಲಿ ಸೆಪ್ಟೆಂಬರ್ 3ರಂದು ಪತ್ತೆಯಾದ ಮೃತದೇಹಕ್ಕೆ ಸಂಬಂಧಿಸಿ ಕೊಲೆ ಮಾಡಲಾಗಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಡಿಸಿಐಬಿ ಪೊಲೀಸರ ತಂಡ ಬಂಧಿಸಿದೆ. ಎರ್ನಾಕುಲಂ ಜಿಲ್ಲೆಯ ಕೊಟ್ಟಕ್ಕಾಕಾತ್ ನಿವಾಸಿ ಔರಂಗಝೀಬ್(37) ಹಾಗೂ ಪಾಲಕ್ಕಾಡು ಜಿಲ್ಲೆಯ ಚುಂದಕಾಡು ಕಾವಶ್ಯೇರಿ ನಿವಾಸಿ ಮಹಮ್ಮದ್ ಶಮನಾಝ್(23) ಬಂಧಿತ ಆರೋಪಿಗಳು.
ಕೇರಳ ರಾಜ್ಯದ ಎರ್ನಾಕುಳಮ್ ಜಿಲ್ಲೆಯ ಕುನ್ನತ್ತನಾಡು ತಾಲೂಕಿನ ಅರೆಕ್ಕಿಪ್ಪಾಡಿ ನಿವಾಸಿ ಉನ್ನಿಕೃಷ್ಣನ್ ಅವರ ಮೃತದೇಹ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಟ್ಟಿ ಹೊಳೆಯಲ್ಲಿ ಸೆಪ್ಟೆಂಬರ್ 3ರಂದು ಪತ್ತೆಯಾಗಿತ್ತು. ಇದೊಂದು ಅಸ್ವಾಭಾವಿಕ ಸಾವು ಎಂಬುದಾಗಿ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆಯ ವೇಳೆ ಮೃತದೇಹದ ಮೇಲೆ ಗಾಯಗಳು ಪತ್ತೆಯಾಗಿದ್ದವು. ಅಲ್ಲದೆ ಮೃತ ವ್ಯಕ್ತಿಯ ಸಹೋದರನ ಮಗ ಇದೊಂದು ವ್ಯವಸ್ಥಿತ ಕೊಲೆ ಎಂದು ದೂರು ನೀಡಿದ್ದರು. ಈ ಪ್ರಕರಣದ ಪತ್ತೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಶೇಷ ತಂಡಗಳನ್ನು ರಚಿಸಿದ್ದರು. ತನಿಖಾ ತಂಡ ನಿರಂತರ ಶೋಧ ನಡೆಸಿದ ಬಳಿಕ ಆರೋಪಿಗಳನ್ನು ಕಾಸರಗೋಡಿನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಇನ್ನು ವಿಚಾರಣೆಯ ವೇಳೆ ತಾವು ಇತರರೊಂದಿಗೆ ಸೇರಿ ಈ ಕೊಲೆ ನಡೆಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಮಹಿಳೆಯೊಬ್ಬರ ವಿಷಯದಲ್ಲಿ ಈ ಕೊಲೆ ನಡೆದಿರುವ ಸಂಭವವಿದ್ದು ಈ ಪ್ರಕರಣದ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಲ್ಲವರಾಗಿದ್ದಾರೆ ಎಂದು ತಿಳಿದುಬಂದಿದೆ. ಔರಂಗಝೀಬ್ ಎಂಬಾತನ ಮೇಲೆ ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಆಳುವ ಪೊಲೀಸ್ ಠಾಣೆಯಲ್ಲಿ 3 ಕೊಲೆಯತ್ನ ಪ್ರಕರಣ 1 ದೊಂಬಿ ಪ್ರಕರಣ, ಕಲ್ಮಶ್ಯೇರಿ ಪೊಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ ಮತ್ತು 1 ದರೋಡೆ ಪ್ರಕರಣ, ಛಾವಕ್ಕಾಡ್ ಪೊಲೀಸ್ ಠಾಣೆಯಲ್ಲಿ 1 ದರೋಡೆಗೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ, ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ 1 ದರೋಡೆಗೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ಮತ್ತು ಬೆನಾನಿಪುರಂ ಪೊಲೀಸ್ ಠಾಣೆಯಲ್ಲಿ ಶಿಶುಭವನ್ ಪ್ರಕರಣ ದಾಖಲಾಗಿದ್ದು, ಒಟ್ಟು 9 ಪ್ರಕರಣಗಳು ಆತನ ವಿರುದ್ದ ದಾಖಲಾಗಿವೆ.
ಇನ್ನು ಹತ್ಯೆಯಾದ ವ್ಯಕ್ತಿಯ ಇನ್ನೋವಾ ಕಾರನ್ನು ಕಾಸರಗೋಡು ಬಸ್ ನಿಲ್ದಾಣ ಸಮೀಪದಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಮುಂದಿನ ತನಿಖೆಗಾಗಿ ಉಪ್ಪಿನಂಗಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.