ಉಡುಪಿ, ಸೆ07(SS): ರಾಜ್ಯದಲ್ಲಿ ಎಲ್ಲವೂ ಸಾಮರಸ್ಯದಿಂದ ನಡೆಯುತ್ತಿದ್ದು, ನನ್ನ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲವೂ ಸಾಮರಸ್ಯದಿಂದ ನಡೆಯುತ್ತಿದೆ. ನನ್ನ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಚುನಾವಣೆಯಲ್ಲಿ ಜಯವಾಗಿರುವುದು ಯಾವುದೇ ಬಣಕ್ಕೆ ಅಲ್ಲ, ಪಿಎಲ್ಡಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜಯವಾಗಿದೆ. ನನ್ನ ಜೊತೆ ಎಲ್ಲರೂ ಸುಮಧುರ ಬಾಂಧವ್ಯದಿಂದ ಇದ್ದಾರೆ ಎಂದು ತಿಳಿಸಿದ್ದಾರೆ.
ಉಡುಪಿಯ ಮಣಿಪಾಲದ ರಜತಾದ್ರಿಯಲ್ಲಿರುವ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ನಾಯಕರು ಹಾಗೂ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ, ಜಿಲ್ಲೆಯ ನಾಯಕರು ನೀಡಿದ ಸಲಹೆಯಂತೆ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣ ಭಾಗಗಳ ಅಭಿವೃದ್ಧಿಗಾಗಿ 100 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗಾವಿಯಲ್ಲಿ ಗೊಂದಲವೇ ಇರಲಿಲ್ಲ. ಕೇವಲ ಪಿಎಲ್ಡಿ ಬ್ಯಾಂಕ್ ವಿವಾದ ಮಾತ್ರ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಅಲ್ಲದೇ ಮಾಧ್ಯಮಗಳಲ್ಲಿ ಅಸಾಧ್ಯವಾದುದರ ಬಗ್ಗೆ ಚರ್ಚೆಯಾಗುತ್ತಿದೆ. ಕೇವಲ ಅವರ ಖುಷಿಯಂತೆ ಚರ್ಚೆಯಾಗಿದೆ. ನಾನು ಯಾರನ್ನು ತಡೆಯುವುದಿಲ್ಲ ಎಂದು ಹೇಳಿದರು.
ಕರಾವಳಿ ಭಾಗದಲ್ಲಿ ಕಾಲುಸಂಕದ ಸಮಸ್ಯೆಗಳಿದೆ, ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಅವುಗಳ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಇಲ್ಲಿನ ಜನರಿಗೆ ನೀರಿನ ಸಮಸ್ಯೆಯಿದ್ದು, ವಾರಾಹಿ ನೀರನ್ನು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ. ಮರಳಿನ ಮೇಲಿರುವ ಕಾನೂನನ್ನು ಕೂಡ ಸರಳಗೊಳಿಸಲಿದ್ದೇವೆ ಎಂದು ಹೇಳಿದ ಸಿಎಂ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.