ಒಂದೇ ಹಾಡಿನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ ಮಂಗಳೂರಿನ ಆಟೋ ಡ್ರೈವರ್
Fri, Sep 07 2018 02:05:00 PM
ಸುಪ್ರೀತಾ ಸಾಲ್ಯಾನ್, ಪಡು
ವಯಸ್ಸು 23. ವೃತ್ತಿ ಆಟೋ ಡ್ರೈವರ್. ಹುಟ್ಟಿದ್ದು ಬಡತನದಲ್ಲಿ. ಆದರೆ ಇವರಿಗೆ ಒಲಿದಿರುವುದು ಶ್ರೀಮಂತಿಕೆಯ ಪ್ರತಿಭೆ. ಎಳೆಯ ವಯಸ್ಸಿನಿಂದಲೇ ತಾಯಿ ಶಾರದೆಯ ಮಡಿಲಲ್ಲಿ ಬೆಳೆದ ಇವರು ಸಂಗೀತಾ ಕ್ಷೇತ್ರದ ಅಪ್ರತಿಮ ಕಲಾವಿದ. ಕಂಚಿನ ಕಂಠದ ಅದ್ಭುತ ಪ್ರತಿಭೆಯೆಂದರೂ ತಪ್ಪಗಲಾರದು. ಯೂಟ್ಯೂಬ್ನಲ್ಲಿ "ಜಿಂಕೆ ಅಂದ ಹೊತ್ತು ನಿಂತೋಳೆ" ಎಂಬ ಹಾಡು ಇವತ್ತು ಭಾರೀ ಸದ್ದು ಮಾಡುತ್ತಿದೆಯೆಂದರೆ ಅದಕ್ಕೆ ಈ ಪ್ರತಿಭೆಯೇ ಕಾರಣ. ಅಂದ ಹಾಗೆ ಇವರ ಹೆಸರು ಸಂದೇಶ್ ನೀರುಮಾರ್ಗ.
ಮೂಲತಃ ವಾಮಂಜೂರು ಸಮೀಪದ ದೇವರಪದವು ಎಂಬಲ್ಲಿ ಎನ್. ಗೋಪಾಲ್ ಕೃಷ್ಣ ಮತ್ತು ನಳಿನಾಕ್ಷಿ ದಂಪತಿಯ ಪುತ್ರನಾಗಿ ಜನಿಸಿದ ಸಂದೇಶ್ 23ನೇ ವಯಸ್ಸಿನಲ್ಲಿ ತನ್ನ ಅದ್ಭುತ ಪ್ರತಿಭೆಯಿಂದ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬಡತನದ ಕುಟುಂಬದಲ್ಲಿ ಬೆಳೆದ ಇವರಿಗೆ ಅದ್ಯಾವಾಗ ಸಂಗೀತದಲ್ಲಿ ಒಲವು ಮೂಡಿತೋ ಅನ್ನೋದು ಗೊತ್ತಿಲ್ಲ. ಆದರೆ ಚಿಕ್ಕವನಿರುವಾಗ ನೀರುಮಾರ್ಗದಲ್ಲಿರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಕುಳಿತು ದೊಡ್ಡದಾಗಿ ಭಜನೆ ಹೇಳುತ್ತಿದ್ದ ನೆನಪು ಇವರಲ್ಲಿ ಇನ್ನೂ ಹಾಗೆ ಇದೆ.
ಈ ಪ್ರತಿಭೆಗೆ ಹಾಡುಗಾರಿಕೆ ತಾನೇ ತಾನಾಗಿ ಒಲಿದು ಬಂದ ಆಸ್ತಿ. ಯಾರ ಗರಡಿಯಲ್ಲೂ ಸಂದೇಶ್ ಸಂಗೀತವನ್ನು ಅಭ್ಯಾಸ ನಡೆಸಿಲ್ಲ. ಬಾಲ್ಯದಲ್ಲಿ ಭಜನಾ ಮಂದಿರದಲ್ಲಿ ಹಾಡುತ್ತಿದ್ದ ಭಕ್ತಿ ಗೀತೆಗಳೇ ಇವರಿಗೆ ಸ್ಫೂರ್ತಿ. ಶಾಲಾ-ಕಾಲೇಜು ದಿನಗಳು ಸೇರಿದಂತೆ ಹಾಡು ಹಾಡಲು ಯಾವುದೇ ವೇದಿಕೆಗೆ ಈ ಪ್ರತಿಭೆ ಹತ್ತಿದರೆಂದರೆ ಇವರಿಗೇ ಮೊದಲ ಬಹುಮಾನ. ಈ ಪ್ರತಿಭೆಯ ವಿಶೇಷ ಮಾಧುರ್ಯ, ಕಂಚಿನ ಕಂಠದ ದನಿಗೆ ತಲೆದೂಗದೇ ಯಾರೂ ಇರಲಾರರು. ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅನೇಕ ಬಾರಿ ಈ ಪ್ರತಿಭೆಗೆ ಅತ್ಯುತ್ತಮ ಗಾಯಕ ಪ್ರಶಸ್ತಿ ಲಭಿಸಿದೆ.
ತನ್ನ ಗಾನಯಾನದ ಮೂಲಕ ಸಂಗೀತ ಪ್ರಿಯರನ್ನು ಭಾವಯಾನದಲ್ಲಿ ತೇಲಿಸುವ ಸಂದೇಶ್ ನೀರುಮಾರ್ಗ ತುಳು, ಕನ್ನಡ ಸೇರಿದಂತೆ ಅನೇಕ ಕಿರುಚಿತ್ರಗಳಿಗೆ ಕಂಠ ದಾನ ಮಾಡಿದ್ದಾರೆ. ಮಸ್ಕಿರಿ, ಜವನೆರ್, ಸೈತಾನ್ ಸೇರಿದಂತೆ 5 ಕ್ಕೂ ಮಿಕ್ಕಿ ಕಿರುಚಿತ್ರಗಳಿಗೆ ಹಾಡಿನ ಮೂಲಕ ಪರಿಚಿತನಾಗಿರುವ ಈ ಪ್ರತಿಭೆ ತಮಿಳು, ತೆಲುಗು, ಮಾಲಿಯಾಳಂ, ಮರಾಠಿ, ಹಿಂದಿ, ಕನ್ನಡ ಮತ್ತು ತುಳು ಭಾಷೆಗಳಲ್ಲಿ ಹಾಡುವುದರಲ್ಲಿ ಪ್ರವೀಣರು.
ಎಳೆಯ ವಯಸ್ಸಿನಿಂದಲೇ ಭಕ್ತಿಗೀತೆ, ಜಾನಪದ, ಸುಗಮಸಂಗೀತ, ಸಿನಿಮಾ ಹಾಡುಗಳು ಸೇರಿದಂತೆ ಹಲವಾರು ಗೀತೆಗಳಿಗೆ ಲವಲವಿಕೆಯೊಂದಿಗೆ ತಮ್ಮ ಕಂಠದಾನ ಮಾಡಿರುವ ಇವರು ಗೀತಾ ಗೋವಿಂದಂ ಚಿತ್ರದ ಹಾಡಿಗೆ ಕನ್ನಡದಲ್ಲಿ ತಾನೇ ಸಾಹಿತ್ಯ ಬರೆದು ಕಂಚಿನ ಕಂಠದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಹೌದು, ಈಗಾಗಲೇ ಟಾಲಿವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿರುವ ಗೀತಾ ಗೋವಿಂದಂ ಚಿತ್ರದ ಹಾಡುಗಳು ಎಲ್ಲರ ಮನ ಗೆದ್ದಿದೆ. ಈ ಚಿತ್ರದ "ಇಂಕೇಮ್ ಇಂಕೇಮ್ ಕವಾಲೇ" ಹಾಡನ್ನು ಸಂದೇಶ್ ನೀರುಮಾರ್ಗ ಕನ್ನಡಕ್ಕೆ ಡಬ್ಬಿಂಗ್ ಮಾಡಿದ್ದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಕ್ಷಣ ಮಾತ್ರದಲ್ಲಿ ಈ ಹಾಡು ಹಿಟ್ ಆಗಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಸಂದೇಶ್ ಸೆಳೆದು ಭೇಷ್ ಅನಿಸಿಕೊಂಡಿದ್ದಾರೆ.
ಆಟೋ ಡ್ರೈವರ್ ಆಗಿ ವೃತ್ತಿ ನಡೆಸುತ್ತಿರುವ ಸಂದೇಶ್ ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿದ್ದರು. ವೃತ್ತಿ ನಡೆಸಲು ಸಾಧ್ಯವಾಗದೆ ಕಂಗಲಾಗಿದ್ದರು. ಅ ವೇಳೆ ಈ ಪ್ರತಿಭೆಯ ಕೈ ಹಿಡಿದ ಸಂಗೀತ ಜೀವನದ ದಿಕ್ಕನ್ನೇ ಬದಲಾಯಿಸಿತು. ಸದಾ ಗಾಯನದಲ್ಲಿಯೇ ತಲ್ಲೀನರಾಗಿದ್ದ ಸಂದೇಶ್ "ಇಂಕೇಮ್ ಇಂಕೇಮ್ ಕವಾಲೇ" ಹಾಡಿಗೆ ಕನ್ನಡದಲ್ಲಿ ಸಾಹಿತ್ಯ ಬರೆದು ಡಬ್ಬಿಂಗ್ ಮಾಡಿದ್ದಾರೆ. ಬಳಿಕ ಗೆಳೆಯ ಶೈಲು ಅವರ ನೆರವಿನಿಂದ ಸ್ಟೂಡಿಯೋವೊಂದರಲ್ಲಿ ಡಬ್ಬಿಂಗ್ ಮಾಡಿ ಆ.16ರಂದು ಯೂಟ್ಯೂಬ್ ಗೆ ಹಾಕಿದ್ದಾರೆ. ಕೇವಲ 15 ದಿನಗಳಲ್ಲಿ ಈ ಹಾಡು ಲಕ್ಷಾಂತರ ಮಂದಿಯ ನಿದ್ದೆಗೆಡಿಸಿದೆ. ಈ ಮೂಲಕ ಈಡೀ ರಾಜ್ಯದಲ್ಲಿಯೇ ಸಂದೇಶ್ ಚಿರಪರಿಚಿತನಾಗಿದ್ದಾರೆ.
"ಜಿಂಕೆ ಅಂದ ಹೊತ್ತು ನಿಂತೋಳೆ" ಎಂಬ ಹಾಡಿಗೆ ಗೀತಾ ಗೋವಿಂದಂ ಚಿತ್ರದ ನಟಿ ರಶ್ಮಿಕಾ ಮಂದಣ್ಣ ಕೂಡ ಬೋಲ್ಡ್ ಆಗಿದ್ದು, ಇನ್ಸ್ಟಾಗ್ರಾಂ ಪೇಜ್ ನಲ್ಲಿ ಸ್ಟೇಟಸ್ ಹಾಕಿ ಆಟೋ ಚಾಲಕನ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಮಾತ್ರವಲ್ಲ, ಕನ್ನಡ ಸೇರಿದಂತೆ ತುಳು ಚಿತ್ರರಂಗದಿಂದ ಅನೇಕ ಅವಕಾಶಗಳು ಈ ಪ್ರತಿಭೆಯನ್ನು ಕೈ ಬೀಸಿ ಕರೆಯುತ್ತಿದೆ.
ಕೇವಲ ಸಂಗೀತಾ ಮಾತ್ರವಲ್ಲ, ನಟನೆಯಲ್ಲೂ ಈ ಪ್ರತಿಭೆಯದು ಎತ್ತಿದ ಕೈ. ಸಿನಿಮಾ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಸಂದೇಶ್ ನೀರುಮಾರ್ಗ ಐಸ್ ಕ್ರೀಂ, ನಮ್ಮ ಕುಡ್ಲ, ಜವನೆರ್, ಸೈತಾನ್, ಮಸ್ಕಿರಿ ಸೇರಿದಂತೆ 10ಕ್ಕೂ ಮಿಕ್ಕಿ ಚಿತ್ರಗಳಲ್ಲಿ ನಟಿಸಿದ್ದಾರೆ.
ತನ್ನ ಪ್ರತಿಭೆಗೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈ ಪ್ರತಿಭೆಯ ಕಲಾಜೀವನ ಸುಖಮಯವಾಗಿರಲಿ ಎಂದು ಹರಸೋಣ....