ಮಂಗಳೂರು, ಸೆ 6 (MSP) : ಕರಾವಳಿಯಲ್ಲಿ ಸೆಪ್ಟಂಬರ್ 8ರಂದು ಕೊಂಕಣಿ ಕ್ರೈಸ್ತ ಬಾಂಧವರು ಅದ್ಧೂರಿಯಾಗಿ ಆಚರಿಸುವ ಹೊಸ ಪೈರಿನ ಹಬ್ಬ ಅಥವಾ ಮೋಂತಿ ಹಬ್ಬದಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಾಗೂ ಪದವಿ ಪೂರ್ವ ಶಿಕ್ಷಣಾ ಇಲಾಖೆಗೆ ಈ ಆದೇಶ ಪ್ರತಿ ರವಾನಿಸಿದ್ದು ಶಿಕ್ಷಣ ಸಂಸ್ಥೆಗಳಿಗೆ ಮೋಂತಿ ಹಬ್ಬದ ಪ್ರಯುಕ್ತ ರಜೆ ನೀಡುವಂತೆ ಆದೇಶ ನೀಡಿದ್ದಾರೆ.
9 ದಿನಗಳ ವಿಶೇಷವಾದ ಬಲಿಪೂಜೆಗಳೊಂದಿಗೆ ಪ್ರಾರ್ಥನೆ ಹಾಗೂ ಕೊನೆಯ ದಿನ ನಡೆಯುವ ಹಬ್ಬವನ್ನು ಕರಾವಳಿಯ ಕೊಂಕಣಿ ಸಮುದಾಯ ಅದ್ದೂರಿಯಾಗಿ ಹಬ್ಬವನ್ನು ಆಚರಿಸುತ್ತಿದ್ದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಬೇಡಿಕೆಯಂತೆ ಬಿಷಪ್ ಹೌಸ್ ಬಳಿ ಇರುವ ಕ್ಯಾಥಲಿಕ್ ಸಭಾ ಮಂಗಳೂರು ಸಂಘಟನೆಯೂ, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರಜೆ ನೀಡುವಂತೆ ಮನವಿ ಸಲ್ಲಿಸಿದ್ದರು. ಇದೀಗ ಮುಖ್ಯಮಂತ್ರಿಗಳ ನಿರ್ದೇಶನದಂತೆ ಜಿಲ್ಲಾಧಿಕಾರಿ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಆಯಾ ಶಾಲೆಗಳಿಗೆ ಸ್ಥಳೀಯ ಆಚರಣೆ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ, ನಾಲ್ಕು ದಿನಗಳ ರಜೆ ಘೋಷಿಸುವ ಅಧಿಕಾರ ಇದ್ದರೂ ಹಲವು ಶಾಲಾ ಕಾಲೇಜುಗಳು ಈಗಾಗಲೇ ಈ ರಜೆಯನ್ನು ಬಳಸಿಕೊಂಡದ್ದರಿಂದ ಮೊಂತಿ ಹಬ್ಬಕ್ಕೆ ರಜೆ ಘೋಷಿಸಲು ತೊಡಕಾಗಿ ಪರಿಣಮಿಸಿತ್ತು.