ಕಾರ್ಕಳ,ಸೆ 6 (MSP) : ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವಿವಿಧ ಖಾತೆಯ ಸಚಿವರನ್ನು ಶಾಸಕ ವಿ.ಸುನಿಲ್ ಕುಮಾರ್ ಭೇಟಿ ಮಾಡಿ ಮನವಿ ಸಲ್ಲಿಸಿ ಸಮಾಲೋಚನೆ ನಡೆಸಿದ್ದಾರೆ.
ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಯಮಾಲರವರನ್ನು ಭೇಟಿ ಮಾಡಿದ ಶಾಸಕ ಸುನೀಲ್ಕುಮಾರ್, ಕಾರ್ಕಳದಲ್ಲಿ ಈ ಭಾರಿ ಅತ್ಯಧಿಕ ಮಳೆ ಬಿದ್ದಿದ್ದು ಅಧಿಕ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆರೋಗ ಭಾಧಿಸಿರುವುದರಿಂದ ಅಡಿಕೆ ಬೆಳೆಯನ್ನೇ ನಂಬಿ ಕೊಂಡಿರುವ ಸಾವಿರಾರು ಸಣ್ಣ ಹಾಗೂ ಅತಿ ಸಣ್ಣ ರೈತರು ತುಂಬಾ ನಷ್ಟ ಅನುಭವಿಸಿದ್ದಾರೆ. ಈಗಾಗಲೇ ನಷ್ಟ ಪರಿಹಾರದ ಮೊತ್ತ ದರ ಕಡಿಮೆ ಇದ್ದು ಅದನ್ನು ಪರಿಷ್ಕರಿಸಿ ಪರಿಹಾರ ಮೊತ್ತವನ್ನು ಅಧಿಕಗೊಳಿಸಿ ರೈತರಿಗೆ ಪರಿಹಾರ ಧನ ಬಿಡುಗಡೆ ಮಾಡುವಂತೆ ಕೋರಿದ್ದಾರೆ.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ರವರನ್ನು ಬೇಟಿಯಾಗಿ, ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖಾ ಅಧೀನದ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು.ಶಾಸಕರ ಮನವಿಗೆ ಇಬ್ಬರು ಸಚಿವರು ಪೂರಕವಾಗಿ ಸ್ಪಂದಿಸಿ, ಕಾರ್ಕಳ ಸಮಗ್ರ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ.